Wednesday 18 May 2011

ಹಿಂದುತ್ವ ಸಿದ್ಧಾಂತಕ್ಕೆ ಕಟ್ಟುಬಿದ್ದ 'ಧರ್ಮಶ್ರೀ'

ಹಿಂದುತ್ವ ಸಿದ್ಧಾಂತಕ್ಕೆ ಕಟ್ಟುಬಿದ್ದ 'ಧರ್ಮಶ್ರೀ'
- ಡಾ. ವಿಠ್ಠಲ ಭಂಡಾರಿ ಕೆರೆಕೋಣ

'ಧರ್ಮಶ್ರೀ' ಜನಪ್ರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಕಾದಂಬರಿ. 1961ರಲ್ಲಿ ಪ್ರಕಟವಾದ ಈ ಕಾದಂಬರಿ ಭೈರಪ್ಪನವರ ಮೊದಲ ಕಾದಂಬರಿ ಕೂಡ. ಅಪಾರ ಓದುಗರನ್ನು ಹೊಂದಿರುವ ಇವರ ಕಾದಂಬರಿ ಭಾರತೀಯ ಸಂಸ್ಕೃತಿಯನ್ನು ಇತಿಹಾಸ ಮತ್ತು ತತ್ವಶಾಸ್ತ್ರದ ಮೂಲಕ ಕಟ್ಟಿಕೊಡುವ ಪ್ರಯತ್ನವನ್ನು ಮಾಡುತ್ತದೆ. ಮೇಲ್ನೋಟಕ್ಕೆ ಪ್ರಗತಿಪರವಾದ ಚಿಂತನೆಯನ್ನು ಪ್ರಸ್ತಾಪಿಸುವಂತೆ ಕಂಡರೂ ಕೂಡ ಕೃತಿಯ ಅಂತರ್ಯದಲ್ಲಿ ಸಾಂಪ್ರದಾಯಿಕ ಸನಾತನ ನಂಬಿಕೆಯನ್ನೇ ಶಕ್ತಿಶಾಲಿಯಾಗಿ, ಹೊಸರೂಪದಲ್ಲಿ ಮಂಡಿಸುವ ಕ್ರಿಯೆ ನಡೆದೇ ಇರುತ್ತದೆ. ಇದು ಮೊದಲ ಕಾದಂಬರಿ 'ಧರ್ಮಶ್ರೀ'ಯಿಂದ ಪ್ರಾರಂಭವಾಗಿ ಇತ್ತೀಚೆಗೆ ಬಂದ 'ಆವರಣ'ದವರೆಗೆ ಹಂತಹಂತವಾಗಿ ಗಟ್ಟಿಗೊಳ್ಳುತ್ತಲೇ ಬಂದಿದೆ. 'ಧರ್ಮಶ್ರೀ' ಕ್ರಿಶ್ಚಿಯನ್ ಧರ್ಮದ ವಿರುದ್ಧ ಕಿಡಿಕಾರಿದರೆ 'ಆವರಣ' ಮುಸ್ಲಿಂ ಧರ್ಮದ ವಿರುದ್ಧ ಕಿಡಿಕಾರುತ್ತದೆ. ಈ ಎರಡೂ ಕೃತಿಯಲ್ಲಿಯೂ ನಮ್ಮ ಸಂವಿಧಾನ ಕೊಟ್ಟಿರುವ 'ಯಾವುದೇ ಧರ್ಮವನ್ನು ಸ್ವೀಕರಿಸುವ ಯಾ ತಿರಸ್ಕರಿಸುವ' ಹಕ್ಕಿನ ವಿರುದ್ಧ ಜನರನ್ನು ಎತ್ತಿಕಟ್ಟುತ್ತದೆ. ಮತಾಂತರವೇ ಈ ದೇಶದ ಮುಖ್ಯ ಸಮಸ್ಯೆಯೆಂದೂ ಇದರ ವಿರುದ್ಧ ಹೋರಾಡುವವನೇ ನಿಜವಾದ ರಾಷ್ಟ್ರಭಕ್ತನೆನ್ನುವ ವಾದವನ್ನು ಕಾದಂಬರಿ ಪ್ರತಿಪಾದಿಸುತ್ತದೆ. ಇದಕ್ಕೆ ಪೂರಕವಾಗಿ ಹಲವು ಕಲ್ಪಿತ ಘಟನೆಗಳನ್ನು ಇತಿಹಾಸದ ಘಟನೆಗಳೆನ್ನುವಂತೆ ಮುಂದೊತ್ತಿ ಸಂವಿಧಾನದತ್ತ ಮೌಲ್ಯದ ವಿರುದ್ಧ ಜನರನ್ನು ಅಣಿಸಿರೆಸುತ್ತಿರುವ 'ಹಿಂದುತ್ವವಾದಿ' ಸಂಘಗಳಿಗೆ ಪ್ರಚೋದನೆಯನ್ನು, (ಅ)ನೈತಿಕ ಬೆಂಬಲವನ್ನು ಕೊಡುತ್ತಿದೆ. ಜೀವನದಲ್ಲಿ ವಿಮೌಲ್ಯಗಳನ್ನು ಅರಿಯುವುದು ಮಾತ್ರವಲ್ಲದೆ ಸುಮೌಲ್ಯಗಳ ಬಗೆಗೆ ನಮ್ಮ ಅಂತಃಕರಣದ ಆಕರ್ಷಣೆಯನ್ನು ಪರೋಕ್ಷವಾಗಿ ಹೆಚ್ಚಿಸುವ ಕೆಲಸವನ್ನು ಸಾಹಿತ್ಯವು ಮಾಡುತ್ತವೆ ಎಂದು ಭೈರಪ್ಪನವರು ಒಂದೆಡೆ ಬರೆಯುತ್ತಾರೆ. ಆದರೆ ಭೈರಪ್ಪನವರು ತಮ್ಮ ಕಾದಂಬರಿಯಲ್ಲಿ ಪ್ರತಿಪಾದಿಸುವ ವಿಮೌಲ್ಯ (ಪ್ರಗತಿಪರ, ಪ್ರಜಾಸತ್ತಾತ್ಮಕ, ಸರ್ವಧರ್ಮಸಹಿಷ್ಣುತಾ ಸಿದ್ಧಾಂತ) ಮತ್ತು ಸುಮೌಲ್ಯ (ಸನಾತನ, ಸಂವಿಧಾನ ವಿರೋಧಿ, ಹಿಂದುತ್ವ ಸಿದ್ಧಾಂತ)ದ ಕುರಿತಾದ ಒತ್ತಾಯ ಈ ದೇಶ ರೂಢಿಸಿಕೊಂಡು ಬಂದ ಮೂಲಭೂತ ಗುಣಗಳಿಗೇ ವಿರುದ್ಧವಾದದ್ದು. ಅವರ ಹಲವು ಲೇಖನಗಳಲ್ಲಿ, ಕಾದಂಬರಿಗಳಲ್ಲಿ ಇಂತಹ, ಅನಾರೋಗ್ಯಪೂರ್ಣ ತಿಳುವಳಿಕೆಯನ್ನು ಆಕರ್ಷಕ ಶೈಲಿಯಲ್ಲಿ ಹೆಣೆದಿಡುವ ಅಪಾಯ ಇದ್ದೇ ಇದೆ.
ಅವರ ಮೊದಲ ಕಾದಂಬರಿ 'ಧರ್ಮಶ್ರೀ'ಯ ಮುನ್ನುಡಿಯಲ್ಲಿ ತನ್ನ ಗ್ರಹಿಕೆ ಬದಲಾದ ಕುರಿತು ಬರೆಯುತ್ತಾರೆ, ಆಗ ಇನ್ನೂ ನಾನು ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ಓದುತ್ತಿದ್ದೆ. ಇತರ ಬಹುಭಾಗ ಇಂಗ್ಲೀಷ್ ಕಲಿಯುವ ವಿದ್ಯಾಥರ್ಿಗಳಂತೆ ನಾನೂ ಪಾಶ್ಚಿಮಾತ್ಯ ನಾಗರಿಕತೆ, ಅವರ ಜೀವನದೃಷ್ಟಿ ಮೊದಲಾದವುಗಳಿಗೆ ಮಾರುಹೋಗಿದ್ದೆ. ವಿಲೋಮವಾಗಿ ಭಾರತೀಯವಾದ ಎಲ್ಲದರ ಬಗೆಗೂ ಒಂದು ಬಗೆಯ ಸುಪ್ತ ತಿರಸ್ಕಾರವು ನನ್ನಲ್ಲಿ ಬೆಳೆದಿತ್ತು (ಮುನ್ನುಡಿ; ಧರ್ಮಶ್ರೀ, 1999) ಆದರೆ ಇದು ತಪ್ಪು ತಿಳುವಳಿಕೆ ಎಂದು ತಿಳಿದದ್ದು ಆನಂದಕುಮಾರ ಸ್ವಾಮಿಯವರ ಬರಹದ ಮೂಲಕ. ಕುಮಾರಸ್ವಾಮಿಯವರ ಬರಹವು ಭಾರತೀಯ ಸಂಸ್ಕೃತಿ, ಕಲೆ, ತತ್ವ, ಜೀವನದ ವಿಧಾನ ಮೊದಲಾದವುಗಳ ವಿಷಯದಲ್ಲಿ ನನ್ನ ಅಭಿಪ್ರಾಯವನ್ನು ತಿದ್ದಲು ಔಷಧವಾದುದು ಮಾತ್ರವಲ್ಲ, ಆ ಬಗೆಗೆ ಇನ್ನೂ ಹೆಚ್ಚು ತಿಳಿಯಬೇಕೆಂಬ ಕುತೂಹಲವನ್ನು ಕೆರಳಿಸಿತು ಎನ್ನುವಲ್ಲಿ ಭೈರಪ್ಪನವರ ವೈಚಾರಿಕತೆಯನ್ನು ಪ್ರಭಾವಿಸಿದ ತಾತ್ವಿಕತೆಯ ಅರಿವಾಗುತ್ತದೆ. ಇಲ್ಲಿಂದ ಅವರಿಗೆ 'ಹಿಂದುತ್ವ' ಸುಮೌಲ್ಯವಾಗಿ, ಪಾಶ್ಚಾತ್ಯ ನಾಗರಿಕತೆಯೆಲ್ಲವೂ ವಿಮೌಲ್ಯವಾಗಿ ಕಾಣಲು ತೊಡಗಿದೆ. ಸುಮೌಲ್ಯಗಳೆಲ್ಲವೂ ನಮ್ಮ ಸಂಸ್ಕೃತಿಯಲ್ಲಿಯೇ ಅಡಕವಾಗಿರುವುದೆನ್ನುವ ತೀಮರ್ಾನಕ್ಕೆ ಬರುತ್ತಾರೆ. ಹಾಗಾಗಿಯೇ ಹಿಂದೂ ಧರ್ಮ ಮತ್ತು ಅದರ ವೈಚಾರಿಕ ಸ್ಥಿತಿಗಳನ್ನು ಬೇರೆ ಬೇರೆ ಕಾದಂಬರಿಗಳಲ್ಲಿ ವಿದ್ವತ್ ಪೂರ್ಣವಾಗಿ ಮತ್ತು ಅಷ್ಟೇ ಉತ್ಸಾಹ ಪೂರ್ಣವಾಗಿ ಮಂಡಿಸುತ್ತಾರೆ. ಇದರ ಫಲವೇ 'ಧರ್ಮಶ್ರೀ' ಇಡೀ ದೇಶದಲ್ಲಿ ಇಂದು ಸಂಘಪರಿವಾರಗಳು ಮತಾಂತರದ ಕುರಿತು ಗಲಭೆ-ಗಲಾಟೆ ಎಬ್ಬಿಸುತ್ತಿದೆ. ಅಲ್ಪಸಂಖ್ಯಾತರ ದೇವಾಲಯಗಳ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತಿವೆ; ಭಯದ ವಾತಾವರಣ ನಿಮರ್ಿಸುತ್ತಿದೆ; ಇವರೆಂದೂ ಅಪ್ಪಿ ತಪ್ಪಿಯೂ ಬಡತನ ಹಸಿವು, ನಿರಕ್ಷರತೆಯಂತಹ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ. ಮತಾಂತರವನ್ನು ಒಂದು ರಾಜಕೀಯ ಅಸ್ತ್ರವನ್ನಾಗಿಸುತ್ತಿದ್ದಾರೆ. ಇತ್ತೀಚೆಗೆ ಸ್ವತಃ ಭೈರಪ್ಪನವರು, ಚಿದಾನಂದ ಮೂತರ್ಿಯವರು ಮತಾಂತರದ ಬಗ್ಗೆ ಗಲಾಟೆ ಎಬ್ಬಿಸಿದ್ದಾರೆ. ಒಡೆದ ಮನಸ್ಸನ್ನು ಬೆಸೆಯುವ ಕೆಲಸವನ್ನು ಸಾಹಿತ್ಯ ಮಾಡಬೇಕಿತ್ತು. ಆದರೆ ಭೈರಪ್ಪನವರ ಹಲವು ಸಾಹಿತ್ಯ ಬೆಸೆದ ಮನಸ್ಸನ್ನು ಒಡೆಯುವ ಕೆಲಸ ಮಾಡುತ್ತಿದೆ. ಇದು 'ಧರ್ಮಶ್ರೀ'ಯಿಂದಲೇ ಪ್ರಾರಂಭ ಆಗಿದೆ.
ಭಾರತಕ್ಕೆ ಕ್ರಿಶ್ಚಿಯನ್ರ ಆಗಮನ. ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ಆರೋಗ್ಯ ಕೇಂದ್ರಗಳ ಸ್ಥಾಪನೆಗಳೆಲ್ಲವುಗಳ ಹಿಂದಿರುವ ಏಕೈಕ ಕಾರಣ 'ಮತಾಂತರ' ಮಾತ್ರ ಎನ್ನುವುದು ಕಾದಂಬರಿಕಾರನ ನಿಲುವು. ಇದನ್ನೇ 'ಧರ್ಮಶ್ರೀ'ಯಲ್ಲಿ ಚಿತ್ರಿಸಲಾಗಿದೆ.
ಆಳುವ ವರ್ಗದವರೊಡನೆ ತಮಗಿರುವ ಸಂಬಂಧವನ್ನು ಕ್ರೈಸ್ತ ಮಿಷನರಿಗಳು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ತಮ್ಮ ಮತೀಯರ ಸಂಖ್ಯೆಯನ್ನು ಬೆಳೆಸಲು ಎಷ್ಟೋ ವೇಳೆ ಹೀನ ಮಾರ್ಗವನ್ನು ಹಿಡಿಯುತ್ತಿದ್ದಾರೆ...... ಸಾಲದ ಸುಳಿಗೆ ಸಿಲುಕಿದರೆ ರೈತನು ಮತಾಂತರ ಹೊಂದುವ ಷರತ್ತಿನ ಮೇಲೆ ಮಿಶನರಿ ಅವನಿಗೆ ಧನಸಹಾಯ ಮಾಡುತ್ತಾನೆ. ಒಬ್ಬ ಹಿಂದೂ ಪಂಡಿತನು ಮಿಷನರಿಗಳನ್ನು ವಿರೋಧಿಸಿದರೆ ಆ ಪಂಡಿತನನ್ನು ಸರಕಾರದಿಂದ ಶಿಕ್ಷಿಸುವುದಾಗಿ ಅವನು ಹೆದರಿಸುತ್ತಾನೆ. ಏಕೆಂದರೆ ಸರಕಾರವೇ ಆತನದಾಗಿದೆ (ಪು. 83-84)
ಕ್ರೈಸ್ತ ಪಾದ್ರಿ, ಅವರಲ್ಲೂ ವಿದೇಶಿ ಬಿಷಪ್ಪ್ರಿಗೆ, ಮಾಂಸವಿಲ್ಲದೆ ನಡೆಯುವುದಿಲ್ಲ. ಇತರ ಪ್ರಾಣಿಗಳನ್ನು ದೇವರು ಸೃಷ್ಟಿಸಿರೋದೇ ಮನುಷ್ಯನ ಆಹಾರಕ್ಕೆ ಅಂತ ಅವನು ನಂಬುತ್ತಾನೆ. ಅಹಿಂಸೆಯ ತತ್ವದ ಬೆಲೆ ಎಲ್ಲಿಗೆ ಬಂತು? ಇವೆಲ್ಲದರ ಪರಂಪರೆಯ ಮತ್ತು ಇತಿಹಾಸದ ಕಲ್ಪನೆಯೇ ಇಲ್ದೆ ಶುದ್ಧ ಅನಾಗರಿಕರಂತೆ ಪಶ್ಚಿಮ ದೇಶದ ಪಾದ್ರಿ ಇಡೀ ಭಾರತವನ್ನೇ ಮತಾಂತರಗೊಳಿಸುವ ಪ್ರಯತ್ನದಲ್ಲಿದ್ದಾನೆ. (ಪು. 93)
ಇವೆರಡು ಉದಾಹರಣೆಗಳು ಮಾತ್ರ. ಇಂತಹ ನೂರಾರು ವಾಕ್ಯ ವೃಂದಗಳು ಕಾದಂಬರಿಯಲ್ಲಿ ತುಂಬಿಕೊಂಡಿದೆ. ಕ್ರೈಸ್ತ ಧರ್ಮವನ್ನು ಹೀನಾಮಾನವಾಗಿ ಬೈಯುವುದೇ ಬಹಳ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿರುವುದರಿಂದ ವಾಸ್ತವವಾದ, ಅತಾಕರ್ಿಕವಾದ ಇಂತಹ ಬರವಣಿಗೆ ಲೇಖಕರಿಗೆ ಸಾಧ್ಯ ಆಗಿದೆ. ಹೀಗೆ ಕ್ರೈಸ್ತ ಸಮಾಜವನ್ನು ಚಿತ್ರಿಸುವಾಗಲೆಲ್ಲಾ ಲೇಖಕನು ಏಕಮುಖವಾಗಿ ಹೊರಟಿದ್ದಾರೆ ಎನಿಸುತ್ತದೆ. ಕ್ರೈಸ್ತಧರ್ಮ ಅಸಹಿಷ್ಣು ಧರ್ಮವೆಂದೂ, ಅವರೆಲ್ಲರೂ ಮುರ್ಖರೋ ಹಿಂದೂ ಧರ್ಮದ ವಿರೋಧಿಗಳೋ, ಧರ್ಮ ಲಂಪಟರೋ, ಹೀನ ವ್ಯಕ್ತಿತ್ವವದರೋ ಆಗಿದ್ದಾರೆ ಎನ್ನುವಂತೆ ಕಾದಂಬರಿಯಲ್ಲಿ ಚಿತ್ರಿಸಿದ್ದಾರೆ. ಇಡೀ ಕಾದಂಬರಿಯಲ್ಲಿ ಅವರ ಒಂದೇ ಒಂದು ಒಳ್ಳೆಯ ಕೆಲಸವಾಗಲಿ, ಒಬ್ಬನೇ ಒಬ್ಬ ಒಳ್ಳೆಯ ವ್ಯಕ್ತಿಯಾಗಲೀ ಇದ್ದಾನೆಯೆನ್ನುವ ವಿವರ ಬರುವುದಿಲ್ಲ. ಇಂತಹ ಪೂರ್ವನಿಧರ್ಾರಿತವಾದ ಚೌಕಟ್ಟಿನಲ್ಲಿಯೇ ಕಾದಂಬರಿಯು ಮುಂದುವರೆಯುತ್ತದೆ.
ಇದಕ್ಕೆ ಪಯರ್ಾಯವಾಗಿ ಹಿಂದೂ ಧರ್ಮದ ಹಿರಿಮೆಯ ಚಿತ್ರಣ ಇನ್ನೊಂದೆಡೆಯಲ್ಲಿ ಚಿತ್ರಿಸುತ್ತಾರೆ. ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಸತ್ಯ (ಕಥೆಯ ಕೇಂದ್ರ ಪಾತ್ರ) ಪ್ರಾರಂಭದ ದಿನಗಳಿಂದಲೂ ಸನಾತನ ಆಚರಣೆಗಳಲ್ಲಿ ನಂಬಿಕೆ ಉಳ್ಳವನು. ತನ್ನ ಶ್ರೇಯಸ್ಸಿಗೆ ಕಾರಣರಾದ, ಮನೆಯಲ್ಲಿಟ್ಟುಕೊಂಡು ಅವನ ಓದಿಗೆ ನೆರವಾದ ಮಾಸ್ತರ ಮನೆಯಲ್ಲಿಯೇ ಬೇರೆ ಅಡಿಗೆ ಮಾಡಿಕೊಂಡವನು. ಒಮ್ಮೆ ಮಾತನಾಡುತ್ತ ರಾಚಮ್ಮ ತಿನ್ನಲು (ಕ್ರಿಶ್ಚಿಯನ್ ಸಹಪಾಠಿ) ದೊಸೆ ಕೊಟ್ಟಾಗ ಅವಳ ಕೆನ್ನೆಗೆ ಹೊಡೆದು ಅಡ್ಡಜ್ಞಾನದಲ್ಲಿದ್ದಾಗ ಉಪಾಯವಾಗಿ ನನ್ನ ಮುಂದೆ ತಿಂಡಿ ಇಟ್ಟು ಜಾತಿ ಕೆಡಿಸಬೇಕು ಅಂತ ಮಾಡಿದ್ದೆಯಾ ? ಎಷ್ಟು ದಿನದಿಂದ ಕಲಿತಿದ್ದೆ ಈ ವಿದ್ಯಾನಾ? (ಅದೇ; ಪು. 30) ಎಂದು ಕೂಗಾಡಿ ತನ್ನ ಜಾತಿ ಪಾವಿತ್ರ್ಯತೆ(!)ಯನ್ನು ಉಳಿಸಿಕೊಂಡವನು. ರಾಚಮ್ಮ ಒಮ್ಮೆ ಹೊಲೆಯರ ಕೇರಿಯ ಮೂಲಕ ಊರ ಕೆರೆಗೆ ಒಯ್ದಾಗ, ದಲಿತರ ಕೇರಿ ಹೊಕ್ಕಿ ಬಂದ ಮೈಲಿಗೆಯ ಕಾರಣದಿಂದ ಕೆರೆಯಲ್ಲಿ ಎಲ್ಲಾ ಬಟ್ಟೆ ತೊಳೆದು, ಒಣ ಹಾಕಿ, ಸ್ನಾನ ಮಾಡಿ ಬರುತ್ತಾನೆ. ಇಂತ ಸತ್ಯ ಶಿಕ್ಷಣ ಪಡೆದಂತೆ ಸ್ವಲ್ಪ ಬದಲಾದರೂ ಆರೆಸ್ಸೆಸ್ ಕಾರ್ಯಕರ್ತ ಶಂಕರನ ಸ್ನೇಹ ಬೆಳೆಸಿದ ನಂತರ ತನ್ನ ಈವರೆಗಿನ ನಂಬಿಕೆಗೆ ಒಂದು ಸಿದ್ಧಾಂತದ ಚೌಕಟನ್ನು ನಿರ್ಮಿಸಿಕೊಳ್ಳುತ್ತಾನೆ. ಹಿಂದೂ ಧರ್ಮ, ಅದರ ಲಕ್ಷಣ, ಸ್ವಭಾವದ ಕುರಿತು ಶಂಕರ ಮತ್ತು ಸತ್ಯರ ಉತ್ಸಾಹಪೂರ್ಣ ವ್ಯಾಖ್ಯಾನಗಳು ಕಾದಂಬರಿಯ ತುಂಬಾ ವ್ಯಾಪಿಸಿಕೊಂಡಿದೆ.
ಸತ್ಯನ ಬಾಲ್ಯ ಸ್ನೇಹಿತೆ ರಾಚಮ್ಮ (ಕ್ರಿಶ್ಚಿಯನ್)ನೊಡನೆ ಮಾತನಾಡುವಾಗ ಸತ್ಯ ಹಿಂದೂ ಧರ್ಮದ ಉತ್ತಮಿಕೆಯನ್ನು ಪ್ರತಿಪಾದಿಸುತ್ತಿದ್ದರೂ ಸೂಕ್ಷ್ಮವಾಗಿ ನೋಡಿದರೆ ಹಿಂದೂ ಧರ್ಮದ ದೌರ್ಬಲ್ಯವನ್ನು ಚೆನ್ನಾಗಿ ಅಭಿವ್ಯಕ್ತ ಪಡಿಸುತ್ತದೆ. ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕರೂಪತೆಯಿಲ್ಲ. ಹೊರನೋಟಕ್ಕೆ ಹರಕುಮುರುಕಾಗಿ, ತೇಪೆ ಹಾಕಿದ ಹಳೆಯ ದಟ್ಟದಂತೆ ಕಾಣಿಸುತ್ತೆ. ಆದರೆ ಅದರ ಅಂತರಂಗ ಅರಿಯಲು ಪ್ರಯತ್ನಪಟ್ಟವನಿಗೆ ಮಾತ್ರ ಅದರ ಸೊಬಗಿನ ಅನುಭವವಾಗುತ್ತೆ. ಹಿಂದೂ ಎಂಬುದು ಬರಿಯ ಮತವಲ್ಲ. ಅದೊಂದು ಸಂಸ್ಕೃತಿ, ಜೀವನಚಕ್ರ, ಆ ಜೀವನದ ಚೈತನ್ಯ ಕುಗ್ಗಿಲ್ಲ. ಕೆಲವು ಕೆಟ್ಟ ಅಭ್ಯಾಸಗಳಿಂದ ಅದಕ್ಕೆ ಮೋಡ ಮುಸುಕಿದಂತೆ ಕಾಣುತ್ತೆ.'' (ಅದೇ; ಪು. 92-93) ಎನ್ನುತ್ತಾನೆ. ಹಿಂದೂ ಧರ್ಮದಲ್ಲಿ ಒಗ್ಗಟ್ಟಿಲ್ಲ ಎಂದು ಹೇಳುವಾಗ ಅದು ಹಿಂದೂ ಧರ್ಮದಲ್ಲಿಯ ಜಾತಿ-ಜಾತಿಗಳ ಮಧ್ಯದ ತರತಮತೆಗೆ ಕಾರಣವಾಗುವುದನ್ನು ಅರಿಯುವುದಿಲ್ಲ. ದೇವಪ್ರಸಾದ, ರಾಚಮ್ಮ ಸತ್ಯ, ಲಿಲ್ಲಿ, ಸುತ್ತು ಕುಳಿತು ಹರಟೆ ಹೊಡೆಯುತ್ತಿದ್ದರು. ಆಗ ರಾಚಮ್ಮ ಒಳಗೆ ಹೋಗಿ ಮೂರು ಲೋಟ ಕಾಫಿ ತಂದು ಕೊಟ್ಟಳು. ಸತ್ಯ ಕಾಫಿ ಕುಡಿಯುವುದಿಲ್ಲವೆಂದು (ಕ್ರಿಶ್ಚಿಯನ್ರ ಮನೆಯಾಗಿರುವುದರಿಂದ) ಹಣ್ಣುಗಳನ್ನು ತಂದುಕೊಟ್ಟಳು. ಇದಾದನಂತರ ಲಿಲ್ಲಿ ಸತ್ಯನೊಡನೆ ನೀವು ಕಾಫಿ ಮುಟ್ಟಲಿಲ್ಲ. ನೀವು ಅತ್ತಿಗೆಯ (ರಾಚಮ್ಮನ) ಬಾಲ್ಯಸ್ನೇಹಿತರು "ನಿಮ್ಮ ಕೃತಿಯಿಂದ ಅವಳ ಮನಸ್ಸಿಗೆ ನೋವುಂಟಾಗುವುದಿಲ್ಲವೆ ? ಮನುಷ್ಯ ಮನುಷ್ಯರ ಮಧ್ಯೆ ಭೇದ ಮಾಡುವುದು ಸರಿಯೇ ?' ಎಂದು ಕೇಳುತ್ತಾಳೆ. ಅದಕ್ಕೆ ಸತ್ಯನ ವಾದ ಹೀಗಿದೆ. ಸನಾತನ ಹಿಂದೂ ಧರ್ಮವನ್ನು ನೋಡುವಾಗ, ಕೇವಲ ಮತ್ತೊಬ್ಬರು ಮಾಡಿದ್ದನ್ನು ತಿನ್ನುವ ಅಥವಾ ತಿನ್ನದಿರುವ ಒಂದು ದೃಷ್ಟಿಯನ್ನೇ ಗಮನದಲ್ಲಿ ಇಟ್ಟುಕೋಬೇಡಿ. ಸಂಪ್ರದಾಯಸ್ಥ ಹಿಂದೂಗಳ ಮನೆಯಲ್ಲಿ, ಮಕ್ಕಳು ಮಾಡಿದ್ದನ್ನೇ ವಯಸ್ಸಾದ ತಾಯಿ ತಿನ್ನಲ್ಲ. ಸ್ವಯಂ ಪಾಕ ನಿಯಮದ ವಿಸ್ತರಿಸಿದ ರೂಪವೇ ಹೀಗೆ ಕಾಣಿಸುತ್ತೆ. ಊಟ ತಿಂಡಿಯ ವ್ಯವಹಾರಕ್ಕೆ ಹಿಂದೂ ಧರ್ಮದಲ್ಲಿ ತೀರ ಗೌಣ ಸ್ಥಾನ ಕೊಟ್ಟಿದೆ. ಪರಮತ ಸಹಿಷ್ಣುತೆ, ಅಹಿಂಸೆ, ಔದಾರ್ಯಗಳಿಗೆ ಹೆಸರಾದ ಈ ಧರ್ಮವು ಯಾವ ಮನುಷ್ಯನನ್ನೂ ಕೀಳೆಂದು ಗಣಿಸುವುದಿಲ್ಲ'' (ಅದೇ; ಪು. 116) ಎಂದು ಹೇಳುತ್ತಾನೆ. ಇಲ್ಲಿಯೂ ಒಂದು ದ್ವಂದ್ವ ಇದ್ದೇ ಇದೆ. ಜಾತಿ ಪದ್ಧತಿಯೊಳಗಡೆ ಯಾರು ಎಲ್ಲಿ ಊಟಮಾಡಬೇಕು ಎನ್ನುವುದಕ್ಕೆ ಒಂದು ಮೌಖಿಕ ಸಂಹಿತೆಯೇ ಇರುವುದನ್ನು ಸತ್ಯ ಮರೆ ಮಾಚುತ್ತಾನೆ. ಮನುಷ್ಯರೆಲ್ಲರೂ ಒಂದೆ ಎಂದಾದರೆ ಯಾಕೆ ಅನ್ಯಜಾತಿಯ, ಧಮರ್ಿಯರ ಮನೆಯಲ್ಲಿ ಊಟ ತಿಂಡಿ ಮಾಡಿಲ್ಲ ? ಇದಕ್ಕೊಂದು ಸಮರ್ಥನೆಯನ್ನು ಸೃಷ್ಟಿಸಿಕೊಳ್ಳುತ್ತಾನೆ.
ಬೇರೆ ಕಡೆ ತನಗೆ ಜಾತಿ ಭೇದವಿಲ್ಲವೆಂದೂ ಹೊಲೆಯರ ಮನೆಯಲ್ಲೂ ತಿಂಡಿ ತಿಂದಿರುವೆನೆಂದು, ಯಾವುದೋ ಮೂಲೆಯಲ್ಲಿದ್ದ ಕ್ರಿಶ್ಚಿಯನ್ ದ್ವೇಷವೇ ತನ್ನಿಂದ ಹೀಗೆ ಮಾಡಿಸುತ್ತಿರಬಹುದೆಂದುಕೊಳ್ಳುತ್ತಾನೆ. ಇದು ಹೌದೆಂದೇ ಆದರೂ ಮುಂದಿನ ಪ್ರತಿಪಾದನೆ ಅದಕ್ಕೆ ಪೋಷಕವಾಗುವುದಿಲ್ಲ. ಹೊಸಕಾಲಕ್ಕೆ ತಕ್ಕಂತೆ ಧರ್ಮವೂ ತನ್ನ ಬಣ್ಣ ಬದಲಾಯಿಸುತ್ತಾ ನಡೆದರೆ ಕಾಲದ ಮಹಿಮೆಯೇ ಸತ್ಯವಾದೀತು. ದಿನವೂ ಬದಲಾಯಿಸುವುದರಲ್ಲಿ ಉಳಿಯುವುದಾದರೂ ಏನು ? ಬದಲಾವಣೆ ಎಂಬುದು ಹಿಂದೂ ಧರ್ಮಕ್ಕೆ ಹೊಸತಲ್ಲ. ಹೊಸ ಅವಶ್ಯಕತೆಗೆ ತಕ್ಕಂತೆ ಮೂಲತತ್ವವನ್ನು ವಿವಿಧ ಕಾಲದ ಋಷಿಗಳು ವಿವಿಧ ರೀತಿಯಲ್ಲಿ ಹೇಳಿದ್ದಾರೆ. ಹಾಗೆ ಹೊಂದಿಕೊಳ್ಳುವ ಗುಣವಿಲ್ಲದಿದ್ದರೆ ಈ ಧರ್ಮ ಐದು ಸಾವಿರ ವರ್ಷಗಳಿಗೂ ಮಿಕ್ಕು ಜೀವಿಸುತ್ತಲೇ ಇರಲಿಲ್ಲ. ಪ್ರಾಚೀನತೆಯಲ್ಲಿ ಕುರುಡು ನಂಬಿಕೆ ಇಟ್ಟಿರುವ ಆರೋಪ ಹಿಂದೂ ಧರ್ಮಕ್ಕಿಂತ ಕ್ರೈಸ್ತಧರ್ಮದ ಮೇಲೆಯೇ ಹೆಚ್ಚಾಗಿ ಬೀಳುತ್ತದೆ. (ಅದೇ; ಪು. 116) ಆತ ತನ್ನ ತಪ್ಪನ್ನು ಸಮಥರ್ಿಸಿಕೊಳ್ಳಲು ಹೇಳಿದರೂ ಅದು ಸಮರ್ಥನೆಯಾಗುವ ಬದಲು ಹಿಂದೂ ಧರ್ಮದ ಸ್ಥಾವರ ರೂಪವನ್ನೇ ಪ್ರಕಟಿಸುತ್ತದೆ. ಹಿಂದೂ ಧರ್ಮದಲ್ಲಿ ಆಗಬಹುದಾದ ಬದಲಾವಣೆ ವಿವಿಧ ಕಾಲದ ಖುಷಿಗಳು ಮಾಡಿಯಾಗಿ ಹೋಗಿದೆ. ಅಂದರೆ ಹಿಂದೂ ಧರ್ಮ ಇಂದು ಯಾವ ಬದಲಾವಣೆಗೂ ಬಾಗಬೇಕಾಗುವುದಿಲ್ಲ. ಧರ್ಮದ ಮಹತ್ನ್ನು ಹೇಳುವ ಇಲ್ಲಿಯ ಪರಂಪರೆ ವ್ಯಾಖ್ಯಾನ ಕೂಡ ಹಿಂದೂ ಧರ್ಮದ ಚಲನಹೀನತೆಯನ್ನೆ ಪ್ರತಿಬಿಂಬಿಸುತ್ತದೆ.
ಅವೈಜ್ಞಾನಿಕತೆಯನ್ನು ಕ್ರಿಸ್ತಧರ್ಮದ ಮೇಲೆ ಹೇರುತ್ತ ಕ್ರೈಸ್ತ ಧರ್ಮ ಗೆಲಿಲಿಯೋನ ವೈಜ್ಞಾನಿಕ ಸಂಶೋಧನೆಯನ್ನು, ಡಾವರ್ಿನ್ನನ ಸಿದ್ಧಾಂತವನ್ನು ವಿರೋಧಿಸಿದ್ದನ್ನು ನೆನಪಿಸಿ, ಕ್ರೈಸ್ತಧರ್ಮದ ಅಂಧಮುಷ್ಟಿಯಿಂದ ಬಿಡುಗಡೆ ಆದ ನಂತರವೇ ಪಶ್ಚಿಮದಲ್ಲಿ ಪ್ರಗತಿ ಸಾಧ್ಯವಾಯಿತು ಎನ್ನುವ ಸತ್ಯನಿಗೆ ಹಿಂದೂ ಧರ್ಮದ ಬಗ್ಗೆ ತಾನೂ ಅದೇ ದೃಷ್ಟಿಯನ್ನು ಹೊಂದಿದ್ದೇನೆ ಎನ್ನುವುದು ತಿಳಿಯುವುದೇ ಇಲ್ಲ. ಅವನಿಗೆ ತಿಳಿಯದಿದ್ದರೂ ಲಿಲ್ಲಿ ಅದನ್ನು ಆತನಿಗೆ ನೆನಪಿಸಹುದಿತ್ತು. ಆದರೆ ಅವಳು ಆ ಕೆಲಸವನ್ನು ಮಾಡುವುದಿಲ್ಲ. ಯಾಕೆಂದರೆ ಕತೆಯ ಸಂಯೋಜನೆಯೇ ಹಾಗೆ ಇದೆ.
ಹಿಂದೂ ಧರ್ಮದಲ್ಲಿರುವ ದೋಷಗಳೆಲ್ಲಾ ಕ್ರಿಶ್ಚಿಯನ್ ಧರ್ಮದಲ್ಲೂ ಇದೆ ಎಂದು ಪ್ರತಿಪಾದಿಸಿ, ಹಿಂದೂವಿನಲ್ಲಿರುವ ಚಾತುರ್ವರ್ಣದ ತಳಹದಿ ಪಶ್ಚಿಮದವರ ವರ್ಗತಳಹದಿಗಿಂತ ಶ್ರೇಷ್ಠ ಎಂದು ಸಾಧಿಸಿ ಬಿಡುತ್ತಾನೆ.
ಇದೇ ಸಂದರ್ಭದಲ್ಲಿ ಉತ್ತಮ ಹಿಂದೂವಿಗೆ ಯಾವಾಗಲೂ ಮಾಂಸಾಹಾರ ವಜ್ರ್ಯವೇ. ಒಬ್ಬ ಉತ್ತಮ ಹಿಂದೂ ಕ್ರೈಸ್ತನಾದರೆ ನಿಧಾನವಾಗಿ ಆದರೂ ಅವನು ಮಾಂಸಾಹಾರಕ್ಕೆ ಅಂಟಿಕೊತ್ತಾನೆ. ಹಿಂದೂ ಗುರು ಶುದ್ಧ ಶಾಖಾಹಾರಿ (ಅದೇ; ಪು. 93) ಎಂಬ ಮಾತು ಬಂದಿದೆ; ಇದು ಹಿಂದುತ್ವವಾದಿಗಳು ಬಹಿರಂಗದಲ್ಲಿ ಹೇಳುವ 'ಹಿಂದೂ ಎಲ್ಲಾ ಒಂದು' ಎಂಬ ಮಾತಿಗೆ ವಿರುದ್ಧವಾಗಿದೆ. ಹಿಂದುತ್ವವಾದಿಗಳು 'ದಲಿತರು' (ಅಸ್ಪೃಶ್ಯ) ಹಿಂದೂಗಳು ಎನ್ನುತ್ತಾರೆ. ಆದರೆ ದಲಿತರು ಉಪಯೋಗಿಸುವ ಆಕಳ ಮಾಂಸಾಹಾರವನ್ನು ತಿರಸ್ಕರಿಸುತ್ತಾರೆ; ಶೂದ್ರರನ್ನು ಹಿಂದೂಗಳು ಎನ್ನುತ್ತಾರೆ. ಆದರೆ ಶೂದ್ರರು ಮಾಂಸಾಹಾರಿಗಳಾಗಿದ್ದಾರೆ. ವೇದೋಪನಿಷತ್ತಿನ ಕಾಲದಲ್ಲಿ, ಸಾಮನ್ಯವಾಗಿ ಬೌದ್ಧ ಧರ್ಮ ಹುಟ್ಟುವವರೆಗೂ ಭಾರತದಲ್ಲಿ ಬ್ರಾಹ್ಮಣರೂ ಮಾಂಸಹಾರಿಗಳೇ ಆಗಿದ್ದರು ಎನ್ನುವ ಉಲ್ಲೇಖ ಇದೆ. ಹಾಗಿದ್ದರೆ ಅವರೆಲ್ಲಾ ಯಾರು ? ಯಾವ ಸಮುದಾಯಕ್ಕೆ ಸೇರಿಸುವುದು ಎನ್ನುವ ಪ್ರಶ್ನೆ ಸಹಜವಾಗಿ ಏಳುತ್ತದೆ. ಅಥವಾ 'ಉತ್ತಮ ಹಿಂದೂ' ಎಂದರೆ ಬ್ರಾಹ್ಮಣ ಎಂದು ಮಾತ್ರ ಆಗುವುದಾದರೆ ಶೂದ್ರರನ್ನು, ದಲಿತರನ್ನು ಮುಟ್ಟಿಸಿಕೊಳ್ಳಬಾರದೆಂಬ ತಾರತಮ್ಯ ನಡಾವಳಿ ಹಿಂದೂ ಧರ್ಮದ ಮುಖ್ಯ ಗುಣ ಎಂದು ಹೇಳಬೇಕಾಗುತ್ತದೆ.
ಹಲವು ಸಲ ವಿವೇಕಾನಂದರ ಬಗ್ಗೆ ಉಲ್ಲೇಖ ಇದೆ. (ಇಲ್ಲಿ ಅವರನ್ನು ತಪ್ಪಾಗಿಯೇ ಉದಾಹರಿಸಿರುವುದನ್ನು ಗಮನಿಸಬಹುದು.) ಹಿಂದೂ ಧರ್ಮದ ಸುಧಾರಣೆಗೆ ಒಳಪಡಿಸಿ ಅದನ್ನು ಸ್ವಯಂ ಸತ್ವಯುತವನ್ನಾಗಿ ಮಾಡಿ ನಿಲ್ಲಿಸುವುದು ವಿವೇಕಾನಂದರ ದೃಷ್ಟಿಯಾದರೆ ಕಾಲದ ಪ್ರಸ್ತುತತೆಯನ್ನು ಅಲ್ಲಗಳೆದು ಹಳೆಯದನ್ನೇ ಪುನರುತ್ಥಾನ ಮಾಡುವ ದೃಷ್ಟಿ ಇಲ್ಲಿಯ ನಿರೂಪಣೆಯ ರೀತಿಯೂ ಕಥಾ ಸಂವಿಧಾನದ ವೈಶಿಷ್ಟ್ಯವೂ ಆಗಿರುವುದು ನಿಚ್ಚಳವಾಗಿದೆ.
ಮೈಸೂರಿನ ಅನಾಥಾಲಯವೊಂದರಲ್ಲಿ ಉಚಿತ ಊಟದ ವಿದ್ಯಾಥರ್ಿಯಾಗಿ ಸತ್ಯ ಸೇರಿಕೊಳ್ಳುತ್ತಾನೆ. ಒಂದು ದಿನ ಊಟದ ವೇಳೆಯಲ್ಲಿ ಹಿರಿಯ ವಿದ್ಯಾಥರ್ಿಗಳಲ್ಲಿ ವಾದ ಸಂವಾದ ನಡೆಯುತ್ತದೆ. ಒಬ್ಬ ವಿದ್ಯಾಥರ್ಿ ಹಿಂದೂ ಧರ್ಮದಲ್ಲಿರುವ ಅನೇಕ ವಿಗ್ರಹಗಳ ಪೂಜೆಯನ್ನು ಟೀಕಿಸುತ್ತಾನೆ. ಆಗ ಅಲ್ಲಿಯೇ ಇದ್ದ ಶಂಕರ ಎಂಬ ವಿದ್ಯಾಥರ್ಿ ವಿವೇಕಾನಂದರು ಹೇಗೆ ವೈಜ್ಞಾನಿಕವಾಗಿ ವಿವರಿಸಿದ್ದಾರೆ ಎಂಬ ಆಧಾರದ ಮೇಲೆ ಹಿಂದೂ ಧರ್ಮದ ಶ್ರೇಷ್ಠತೆಯನ್ನು ವಿಗ್ರಹಾರಾಧನೆಯ ಹಿಂದಿನ ತತ್ವವನ್ನು ವಿವರಿಸುತ್ತಾನೆ. ಭಗವಂತನನ್ನು ಯಾವ ವಿಗ್ರಹದಿಂದಲೂ ಅಥವಾ ಆಕಾರದಿಂದಲೂ ಮಿತಗೊಳಿಸುವುದು ಸಾಧ್ಯವಿಲ್ಲ. ಅವನು ಅನಂತ, ನಿರಾಕಾರ, ನಿಗರ್ುಣ; ರೂಪ, ಕಾಲದೇಶಗಳಿಗೆ ಅತೀತ. ಆದರೆ ಜ್ಞಾನ ಮಾರ್ಗದಲ್ಲಿ ಒಂದು ಹೆಜ್ಚೆ ಮುಂದೆಸಾಗಿ ವಿಚಾರ ಮಾಡುವವನು ಮಾತ್ರ ಈ ಮಾತನ್ನು ಹೇಳಬೇಕು''. (ಅದೇ; ಪು. 46) ಆದರೆ ಸಾಮಾನ್ಯ ಜನರಿಗೆ ಮೂತರ್ಿ ಇಲ್ಲದೆ ಕಲ್ಪಿಸಿ ಆರಾಧಿಸುವುದು ಸುಲಭದ ಕೆಲಸ ಅಲ್ಲ. ಸಾಮಾನ್ಯ ಜನರ ಮನಸ್ಸನ್ನು ಒಂದೆಡೆ ಕ್ರೇಂದ್ರೀಕರಿಸಲು ಇದು ತೀರಾ ಅಗತ್ಯ. ಸಾಧಕನ ಊಧ್ರ್ವಮುಖಮಾರ್ಗದಲ್ಲಿ ಇರುವ ಸಹಾಯಕ ಏಣಿ ವಿಗ್ರಹ. ಹಾಗೆ ನೋಡಿದರೆ ನಿರಾಕಾರ ತತ್ವವನ್ನು ತರ್ಕದ ಪರಮಾವಧಿಗೆ ನಮ್ಮಷ್ಟು ಒಯ್ದವರೇ ಇಲ್ಲ. ಹಾಗಿದ್ದೂ ನಾವು ಸಾಕಾರಕ್ಕೆ ಪೂರ್ಣ ಪ್ರಾಶಸ್ತ್ಯ ಕೊಟ್ಟಿದ್ದೇವೆ. ಹಿಂದೂ ಧರ್ಮದ ವೈಶಾಲ್ಯ ಇರುವುದೆ ಇಲಿ.್ಲ (ಅದೇ; ಪು. 46) ಎನ್ನುತ್ತಾನೆ.
ಬಡತನದಿಂದಾಗಿ ಸ್ವಂತಕ್ಕೆ ಅನ್ನ ಸಿಕ್ಕದೆ ಅನಾಥಾಲಯದ ಅನ್ನ ಉಣ್ಣುತ್ತಿದ್ದವರ ಸಾಮಾಜಿಕ ಸ್ಥಿತಿಯ ಬಗ್ಗೆ ಶಂಕರ ಕಿಂಚಿತ್ತೂ ವಿಚಾರಿಸಲಾರ. ಆದರೆ ಆಧ್ಯಾತ್ಮದ ಆಕಾಶದಲ್ಲಿ ಹದ್ದಿನಂತೆ ಹಾರಬಲ್ಲ. ಶಂಕರನಾಗಲಿ, ಸತ್ಯನಾಗಲಿ ಅಥವಾ ಯಾರೇ ಆಗಲಿ 'ಹಿಂದೂ' ಎನ್ನುವವರಲ್ಲಿ ಇಲ್ಲಿಯ ವೈದಿಕರು (ಬ್ರಾಹ್ಮಣರು) ಮಾತ್ರ ಈ ರೀತಿ ವಾಸ್ತವದ ಸ್ಪರ್ಶವಿಲ್ಲದೆ ಆಧ್ಯಾತ್ಮ ಲೋಕದಲ್ಲಿ ವಿಹರಿಸಬಲ್ಲರು. ಹಾಗೆಯೇ ಅವರ ಹಿಂದೂವಿನೊಳಗಿನ ಇತರರ ಹಸಿವು, ವಿದ್ಯೆ, ಸಂಸ್ಕೃತಿಯ ಕುರಿತಾಗಲಿ ಸ್ಪಂದಿಸಲಾರರು. ಈ ಹಿಂದೆ ಹೇಳಿದ ವಿವೇಕಾನಂದರ ಉದ್ಧರಣೆಯ ಮಾತು ಸ್ಪಷ್ಟವಾಗಿ ಮತ್ತು ದಿಟ್ಟವಾಗಿ ಹೇಳುತ್ತದೆ. ಅಸ್ಪೃಶ್ಯರ ಕುರಿತಾದ, ಶೂದ್ರರ ಕುರಿತಾದ ಕಳಕಳಿಯ ಹೇಳಿಕೆ ಮತ್ತು ಉಪದೇಶವನ್ನು ಕಾದಂಬರಿಯ ಶಂಕರನಾಗಲಿ, ಇಂದಿನ ಹಿಂದುತ್ವವಾದಿಗಳಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘವಾಗಲಿ ತಮ್ಮ ಕಾರ್ಯಕ್ರಮದ ಒಂದಂಶವಾಗಿ ಸ್ವೀಕರಿಸುವುದಿಲ್ಲ ಎಂಬುದು ಮುಸುಕು ಮರೆಯಲ್ಲೇನೂ ಇಲ್ಲ. ಶಂಕರ ತನ್ನ ಗೆಳೆಯನಾದ ಸತ್ಯನಿಗೆ ವಿವೇಕಾನಂದರ ಪುಸ್ತಕಗಳ ಅಭ್ಯಾಸದ ಕುರಿತು ಒತ್ತಾಯಿಸುವುದಿಲ್ಲ. ಬದಲಾಗಿ ಅವರ ಹೇಳಿಕೆಯನ್ನು ಅದರ ಪೂರ್ಣ ಅರ್ಥದೊಡನೆ ಅಥವಾ ಕಳಕಳಿಯೊಂದಿಗೆ ಉದ್ಧರಿಸದೆ. ಸಂದರ್ಭದಿಂದ ಪ್ರತ್ಯೇಕಿಸಿ, ತಮ್ಮ ವಾದವನ್ನು ಸಮಥರ್ಿಸುವ ಹೇಳಿಕೆಯನ್ನು ಮಾತ್ರ ಉದ್ಧರಿಸುತ್ತಾನೆ. ಇದು ಶಂಕರನಂತಹ ಹಲವು ಪ್ರತಿಗಾಮಿ ವಿದ್ವಾಂಸರು, ಪುನರುತ್ಥಾನವಾದಿಗಳು ಮಾಡುವ ದಿನನಿತ್ಯದ ಕೆಲಸ ಎನ್ನುವುದನ್ನು ಗಮನಿಸಬಹುದು. ಆರೆಸ್ಸೆಸ್ನ ಪೂಣರ್ಾವಧಿ ಕಾರ್ಯಕರ್ತನಾದ ಶಂಕರ ಸತ್ಯನಿಗೆ ಆನಂದ ಕುಮಾರಸ್ವಾಮಿ ಪುಸ್ತಕಗಳನ್ನು ಅವಶ್ಯವಾಗಿ ಓದಬೇಕು. ಹಿಂದೂ ಧರ್ಮ ಸಮಾಜ, ಕಲೆ ಮೊದಲಾದವುಗಳ ಕುರಿತು ಆನಂದ ಕುಮಾರಸ್ವಾಮಿಯವರು ಬರೆದಿರುವ ಪುಸ್ತಕಗಳನ್ನು ಲೇಖನಗಳನ್ನು ಓದಬೇಕು. ನನ್ನ ಹತ್ತಿರ ಕೆಲವು ಪುಸ್ತಕಗಳಿವೆ. ಕೊಡುತ್ತೇನೆ, ಓದಿ. ನಮ್ಮ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಸರಿಯಾದ ಅರಿವು ಹುಟ್ಟುತ್ತದೆ (ಅದೇ; ಪು. 49) ಎಂದು ಹಲವು ಪುಸ್ತಕಗಳನ್ನು ಒದಗಿಸುತ್ತಾನೆ.
ಆನಂದ ಕುಮಾರ ಸ್ವಾಮಿ ಹಿಂದೂ ಸಂಸ್ಕೃತಿಯನ್ನು ವ್ಯಾಖ್ಯಾನಿಸಿದ ವಿದ್ವಾಂಸರು. ಆದರೆ ಅವರ ವ್ಯಾಖ್ಯಾನ ಹಿಂದೂವಾದಿಯಾದ ಶಂಕರನಿಗೆ ಆಪ್ಯಾಯಮಾನವಾಗಿರುತ್ತದೆ. ಯಾಕೆಂದರೆ ಕಾದಂಬರಿಯಲ್ಲಿ ಶಂಕರ ಕಟ್ಟಿಕೊಡುವ ಅಥವಾ ಮರುಸ್ಥಾಪಿಸಬಯಸುವ ವೈದಿಕ ಸಂಸ್ಕೃತಿಗೆ ಇದು ಸೈದ್ಧಾಂತಿಕ ಬಲವನ್ನು ಒದಗಿಸುತ್ತದೆ. ಆನಂದ ಕುಮಾರಸ್ವಾಮಿಗಳ ಬಗ್ಗೆ ಲೇಖಕರು ಮುನ್ನುಡಿಯಲ್ಲಿ ವಿವರಿಸಿದ್ದಾರೆ ಎಲ್ಲಾ ಗೌರವಗಳೊಂದಿಗೆ. ಈ ಕುರಿತು ಸಿ. ಎನ್. ರಾಮಚಂದ್ರನ ಹೇಳುವ ಮಾತು ನನಗೆ ಒಪ್ಪಿತವಾಗಿರುವುದರಿಂದ ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಐತಿಹಾಸಿಕ ಆಕಸ್ಮಿಕವಾದ ವಸಾಹತೀಕರಣದಿಂದಾಗಿ, ಆಧುನಿಕ ಸಂಸ್ಕೃತಿಯೊಂದು ಅತ್ಯಂತ ಪ್ರಾಚೀನ ಹಾಗೂ ಭವ್ಯ ಸಂಸ್ಕೃತಿಯೊಂದನ್ನು ಆಕ್ರಮಿಸಿದಾಗ, ಆ ಪ್ರಾಚೀನ ಸಂಸ್ಕೃತಿಯ ತೊಳಲಾಟ ಹಾಗೂ ದ್ವಂದ್ವಗಳು ಅಪಾರ. ಅಂತಹ ಆಕ್ರಮಣ ಎಂತಹ ವಿಚಾರವಂತನನ್ನೂ ಅತಾಕರ್ಕ ಸಮರ್ಥನೆಗಳತ್ತ ದೂಡುತ್ತದೆಂಬುದನ್ನು ನಾವು ಆನಂದ ಕುಮಾರಸ್ವಾಮಿ ಅವರಲ್ಲಿ ನೋಡಬಹುದು........... ಅವರೂ (ಇಂದಿನ ಪುರಿ ಶಂಕರಚಾರ್ಯರಂತೆ) ಆ ಗ್ರಂಥದಲ್ಲಿ ಒಂದೆಡೆ ಸತೀ ಪದ್ಧತಿಯನ್ನು ಸಮಥರ್ಸುತ್ತಾರೆ. ದಕ್ಷಯಜ್ಞದ ಹೋಮಕುಂಡದಲ್ಲಿ ತನ್ನನ್ನು ಅಪರಿಸಿಕೊಂಡ ದಾಕ್ಷಾಯಿಣಿ, ಪ್ರಾಚೀನ ತಮಿಳು ಕಾವ್ಯಗಳಲ್ಲಿ ಬರುವ "ಸತಿ'ಯರು, ಹರ್ಷನ ತಾಯಿ, ಅಕ್ಬರನ ಕಾಲದ ಕವಿ ಮೊಹಮದ್ ರಿಜಾಸವೀ ವಣರ್ಿಸುವ 'ಸತಿ'ಯ ಪತಿ ಪ್ರೇಮ - ಇವೆಲ್ಲವನ್ನು ಉದಾಹರಿಸುತ್ತಾ 'ಸತೀ' ಪದ್ಧತಿಯನ್ನು ಆನಂದ ಕುಮಾರಸ್ವಾಮಿಯವರು ಭವ್ಯಗೊಳಿಸುತ್ತಾರೆ. ಹಾಗೆಯೇ ಹಿಂದೂ ಧರ್ಮದ ವಣರಾಶ್ರಮ ವ್ಯವಸ್ಥೆ, ಉತ್ತರ ಭಾರತದ ಹಿಂದೂಸ್ತ್ರೀಯ ಪದರಾಪದ್ಧತಿ ಇವೆಲ್ಲವನ್ನೂ ಅವರು ಸಮಥರ್ಿಸುತ್ತಾರೆ. (ಸಂಕ್ರಮಣ; ಸಂಚಿಕೆ-262 ; ಜೂನ್ 1994 ; ಪು 16-17) ಇಂತಹ ಕುಮಾರಸ್ವಾಮಿ ಕಾದಂಬರಿಗೆ ಆದರ್ಶವಾಗಿದ್ದಾರೆ. ಸತ್ಯ, ಶಂಕರನ ವಾದದ ಮೂಲ ಇರುವುದೂ ಇಲ್ಲಿಯೆ. ಶಂಕರನ ದೃಷ್ಟಿಯೆಂದರೆ ರಾಷ್ಟ್ರವೆಂದರೆ ಕೇವಲ ಭೌಗೋಳಿಕ ವಿಸ್ತಾರವಲ್ಲ. ಅದು ಒಂದೆರಡು ದಿನದಲ್ಲಿ ಆದ ಸಿದ್ಧವಸ್ತುವಲ್ಲ. ಅದಕ್ಕೆ ಒಂದು ಇತಿಹಾಸ ಬೇಕು, ಉಜ್ವಲ ಪರಂಪರೆ ಬೇಕು, ಜೀವಂತ ಸಂಸ್ಕೃತಿ ಬೇಕು. ಮೇಲಾಗಿ ಜೀವನದ ಮೌಲ್ಯಗಳಲ್ಲಿ ತನ್ನ ತನವಿರಬೇಕು. ಇವೆಲ್ಲವನ್ನೂ ಒಳಗೊಂಡಿರುವುದೇ ರಾಷ್ಟ್ರ. (ಧರ್ಮಶ್ರೀ; ಪು. 60) ಇಲ್ಲಿ ಹೇಳುವ ಇತಿಹಾಸ, ಉಜ್ವಲ ಪರಂಪರೆ, ತನ್ನತನ ಇವೆಲ್ಲ ಧ್ವನಿಸುವುದು 'ಹಿಂದೂ ರಾಷ್ಟ್ರ'ದ ಕಲ್ಪನೆಯನ್ನೇ.
ರಾಷ್ಟ್ರದ ಕಲ್ಪನೆಯನ್ನು ಆರ್.ಎಸ್. ಎಸ್. ಗುರು ಮಾಧವ ಸದಾಶಿವ ಗೋಲ್ವಾಲ್ಕರ್ ಕೊಡುವ ರಾಷ್ಟ್ರದ ಕಲ್ಪನೆಯನ್ನು ಮೇಲಿನದಕ್ಕೆ ಹೋಲಿಸಿ ನೋಡುವುದು ತುಂಬಾ ಉಪಯುಕ್ತವಾಗಿದೆ.
ಹಿಂದೂ ರಾಷ್ಟ್ರದ ನಮ್ಮ ಕಲ್ಪನೆ ಬರಿಯ ರಾಜಕೀಯ ಮತ್ತು ಆಥರ್ಿಕ ಹಕ್ಕುಗಳ ಕಲೆಯಲ್ಲ. ಅದು ಮೂಲತಃ ಸಂಸ್ಕೃತಿಯ ಕಲ್ಪನೆ. ನಮ್ಮ ಪ್ರಾಚೀನ ಭವ್ಯ ಸಾಂಸ್ಕೃತಿಕ ಮೌಲ್ಯಗಳೇ ಅದರ ಜೀವದುಸುರು. ನಮ್ಮ ಸಂಸ್ಕೃತಿಯ ಅಂತರಂಗದ ಬಲವತ್ತರ ಪುನಶ್ಚೇತನ ಒಂದೇ ನಮಗೆ ನಮ್ಮ ರಾಷ್ಟ್ರಜೀವನದ ಸತ್ಯವಾದ ದರ್ಶನವನ್ನು ನೀಡಬಲ್ಲದು. ಮತ್ತು ನಮ್ಮ ರಾಷ್ಟ್ರವನ್ನು ಇಂದು ಕಾಡುತ್ತಿರುವ ಅಸಂಖ್ಯಾತ ಸಮಸ್ಯೆಯನ್ನು ಪರಿಹರಿಸುವಲ್ಲಿ ನಮ್ಮ ಎಲ್ಲಾ ಪ್ರಯತ್ನಗಳಿಗೆ ಸಾರ್ಥಕ ದಿಗ್ದರ್ಶನ ನೀಡಬಲ್ಲದು..... ನಮ್ಮ ಸಂಸ್ಕೃತಿಯ ಪುನಶ್ಚೇತನ ಎಂದಾಗ ಸಾವಿರಾರು ವರ್ಷಗಳಿಂದ ನಮ್ಮ ರಾಷ್ಟ್ರಜೀವನವನ್ನು ಪೋಷಿಸಿ ಅಮರಗೊಳಿಸಿದ ಚಿರಂತನವಾದ ಬಾಳಿನ ಆದರ್ಶಗಳಂತೆ ಮತ್ತೆ ಬಾಳುವುದು, ಎಂಬುದೇ ನಮ್ಮ ಅರ್ಥ (ಚಿಂತನಗಂಗಾ; 101; 1972; ಪು. 26) ಇದನ್ನೇ ಬೇರೆ ರೀತಿಯಿಂದ ಕಾದಂಬರಿಯಲ್ಲಿ ಹೇಳಲಾಗಿದೆ. ಇದೇ ಮುಂದುವರಿದು ನಮ್ಮ ಸಮಸ್ಯೆ ಅನ್ಯ ಧಮರ್ೀಯರು ಈ ದೇಶದಲ್ಲಿ ಇರಬೇಕೆ ? ಬಂದ ಸ್ಥಳಕ್ಕೆ ವಾಪಾಸಾಗಬೇಕೆ ? ಎನ್ನುವಲ್ಲಿಗೆ ತಲುಪುತ್ತದೆ.
ಹಿಂದೂಗಳೆಲ್ಲಾ ಒಂದಾಗಬೇಕೆನ್ನುವ, ರಾಷ್ಟ್ರದ ಸೇವೆ ಮಾಡಬೇಕೆನ್ನುವ ಶಂಕರನೊಂದಿಗೆ ರಾಷ್ಟ್ರದ ಒಂದು ಭಾಗದ ಜನರನ್ನು ದ್ವೇಷಿಸುವ ನೀವು (ಆರೆಸ್ಸೆಸ್ ಕಾರ್ಯಕರ್ತರು) ರಾಷ್ಟ್ರಸೇವೆಯನ್ನು ಹೇಗೆ ಮಾಡುತ್ತೀರಿ ? ಎಂದು ಸಂಶಯ ವ್ಯಕ್ತಪಡಿಸಿದಾಗ ಶಂಕರ ತನ್ನ ವಿಚಾರವನ್ನು ಹೀಗೆ ನಿರೂಪಿಸುತ್ತಾನೆ. ನಾವು ಹಿಂದೂಗಳಲ್ಲದವರನ್ನು ದ್ವೇಷಿಸುತ್ತೇವೆಂದು ನಿನಗೆ ಯಾರು ಹೇಳಿದರು ? ನಮ್ಮ ಮೇಲೆ ಇತರರು ಮಾಡುವ ಅಪಪ್ರಚಾರದಿಂದ ಎಲ್ಲರಲ್ಲಿಯೂ ಈ ಕಲ್ಪನೆ ಬೆಳೆದಿದೆ. ಇತಿಹಾಸದ ಕಾಲದಿಂದ ನೋಡಿದರೂ ಐಕ್ಯಮತ್ಯವಿಲ್ಲದೆ ಹಿಂದೂಗಳು ಹಾಳಾದ ಕತೆಯೇ ಕಾಣುತ್ತಿದೆ. ಹಿಂದೂ ಧರ್ಮದ ಮೇಲೆ ಪ್ರತ್ಯಕ್ಷ, ಪರೋಕ್ಷ ಆಗಿರುವಷ್ಟು ದರೋಡೆ ಇನ್ನಾವ ಧರ್ಮದ ಮೇಲೆಯೂ ಆಗಿಲ್ಲ. ಅನಾಗರಿಕ ರೀತಿಯಲ್ಲಿ ನಾಶಗೊಳಿಸಿದ ನಮ್ಮ ಪವಿತ್ರ ವಿಗ್ರಹಗಳೇನು ಕಡಿಮೆಯೇ? ನಮ್ಮ ತಾಯಿ, ಅಕ್ಕತಂಗಿಯರ ಮೇಲೆ ಮಾಡಿರುವ ಪಾಶವೀ ಕೃತ್ಯಕ್ಕೆ ಲೆಕ್ಕವಿದೆಯೆ ? ಅದೆಷ್ಟು ಜನ ಹಿಂದೂಗಳನ್ನು ಬಲಪ್ರಯೋಗದಿಂದ, ಆಸೆ ಹುಟ್ಟಿಸುವುದರಿಂದ, ಹಿಂದೂ ಧರ್ಮದ ಮೇಲೆ ಮಾಡುವ ಅಪಪ್ರಚಾರದಿಂದ ತಮ್ಮ ಮತಕ್ಕೆ ಇತರರು ಸೇರಿಸಿಕೊಂಡಿಲ್ಲ ? ಸೇರಿಸಿಕೊಳ್ಳುತ್ತಿಲ್ಲ ? (ಧರ್ಮಶ್ರೀ; ಪು. 61)
ಹಿಂದೂ ಧರ್ಮದ ನಡವಳಿಕೆಯಲ್ಲಿ ದೋಷವಿಲ್ಲ ಎನ್ನಲು ಶಂಕರನಿಗೆ ಸಾಧ್ಯವಾಗಿಲ್ಲ. ಹಾಗಿದ್ದರೂ ಪರಮತದವರು ಹಿಂದೂಗಳನ್ನು ಮತಾಂತರಿಸಬಾರದಿತ್ತು ಎನ್ನುವ ವಾದ ಅವನದು. ಕೆಳಜಾತಿಗಳಿಗೆ ವಿದ್ಯೆ ಮತ್ತು ಧನಗಳಿಕೆಯ ಅವಕಾಶವನ್ನೇ ಕೊಚ್ಚಿಹಾಕಿದ, ಅಸ್ಪೃಶ್ಯತೆಯೆಂಬ ಗುಲಾಮಗಿರಿಯನ್ನು ತಮ್ಮ ಗಳಿಕೆಗೆ, ತಮ್ಮ ಆಧ್ಯಾತ್ಮಿಕಕ್ಕೆ ಅನುಕೂಲವಾಗುವಂತೆ ಬಳಸಿಕೊಂಡ, ಅದಕ್ಕೆ ಧರ್ಮ ದೇವರು ಮತ್ತು ಕರ್ಮ ಸಿದ್ಧಾಂತದ ಅಧಿಕೃತ ಮುದ್ರೆ ಒತ್ತಲಾಗಿದೆ. ಇದಕ್ಕೆ ಶರಣಾಗಿ ಬದುಕುವುದೇ ತಮ್ಮ ವಿಧಿ ಎಂಬ ಮಾನಸಿಕ ಒಪ್ಪಿಗೆಯನ್ನು (ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಮಾನಸಿಕ ಕುಬ್ಜತೆ (ಶಾಪ)ಯನ್ನು ರೂಪಿಸಿದ) ಪೋಷಿಸಿಕೊಂಡು ಬಂದ ಹಿಂದೂ ಧರ್ಮದ ಪರಂಪರೆಯ ಬಗ್ಗೆ ಒಂದಿಷ್ಟು ನಾಚಿಕೆಯಾಗಲಿ, ಆತಂಕವಾಗಲಿ ಇಲ್ಲ. ಬದಲಾವಣೆಯ ಕುರಿತ ಆಲೋಚನೆ ಕೂಡ ಎಳ್ಳಷ್ಟು ಇಲ್ಲ. ಈ ನೆಲ ಮತಾಂತರಕ್ಕೆ ತನ್ನಾರೆ ಹದಗೊಂಡಿತ್ತು ಎಂಬ ವಿಚಾರವಾಗಲಿ ಶಂಕರನ ಮೆದುಳಲ್ಲಿ ಸುಳಿಯಲು ಸಾಧ್ಯವಿಲ್ಲ.
ಭಾರತ ಯಾಕೆ ವಿದೇಶಿಯರಿಗೆ ಸುಲಭ ತುತ್ತಾಯಿತು ಎನ್ನುವುದನ್ನು ರಾಮಮನೋಹರ ಲೋಹಿಯಾ ವಿವರಿಸುತ್ತಾರೆ. ವಿದೇಶಿ ಆಕ್ರಮಣಗಳಿಗೆ ಭಾರತೀಯರು ತುತ್ತಾದುದಕ್ಕೆ ಆಂತರಿಕ ಜಗಳ ಹಾಗೂ ಸೆಣಸಾಟವೇ ಕಾರಣ ಎಂಬುದಾಗಿ ಆರೋಪಿಸಲಾಗಿದೆ. ಇದು ಅವಿವೇಕದ ಸಂಗತಿ. ಅದಕ್ಕೆ ಅತ್ಯಂತ ದೊಡ್ಡ ಹಾಗೂ ಏಕೈಕ ಕಾರಣವೆಂದರೆ ಜಾತಿ. ಅದು ಹತ್ತರಲ್ಲಿ ಒಂಬತ್ತು ಮಂದಿಯನ್ನು ರಾಷ್ಟ್ರದ ಗಂಭೀರ ದುರಂತಗಳನ್ನು ಸುಮ್ಮನೆ ನಿಲರ್ಿಪ್ತವಾಗಿ ನೋಡುವ ಮೂಕ ಪ್ರೇಕ್ಷಕನನ್ನಾಗಿಸುತ್ತದೆ''. ((ಸಂ.) ಕಾಳೇಗೌಡ; ನಾಗವಾರ; 2000; ಪು. 89) ಆರ್. ಎಸ್. ಎಸ್. ನ ಸಿದ್ಧಾಂತದಿಂದ ವೈಚಾರಿಕ ಬಹುತ್ವವನ್ನೇ ಕಳಕೊಂಡ ಶಂಕರ ಇಂಥ ವಿಚಾರದ ಅಸ್ತಿತ್ವವನ್ನೇ ಒಪ್ಪಿಕೊಳ್ಳಲಾರ. ಅವನದು ಏನಿದ್ದರೂ ಪರವಿರೋಧಿ ಮನೋಭಾವ. ಆ ಕುರಿತು ಸ್ಪಷ್ಟವಾದ ಅಭಿಪ್ರಾಯ ಇದು.
ನಾನು ಪೂಜಿಸುವ ದೇವರು ನನ್ನ ರಾಷ್ಟ್ರದೇವರಾಗಬೇಕು. ನಾನು ಸತ್ತರೆ ನನ್ನ ಚಿತಾಭಸ್ಮವನ್ನು ಗಂಗಾನದಿಯಲ್ಲಿ ತೇಲಿ ಬಿಟ್ಟರೆ ಸಾಕು. ಆದರೆ ಇತರರ ಆದರ್ಶ ಹಾಗಿಲ್ಲ. ರಾಷ್ಟ್ರಭಕ್ತಿಯ ಪ್ರಶ್ನೆ ಬಂದಾಗ ಅವರು ಹಿಂದೂ ದೇಶಕ್ಕೆ ನಿಷ್ಠೆ ತೋರಿಸಬಹುದು. ಧರ್ಮದ ಪ್ರಶ್ನೆ ಬಂದಾಗ ಮೆಕ್ಕಾ ಅಥವಾ ಬೆತ್ಲಹೇಮಿನ ಮೇಲೆಯೇ ಅವರ ನಿಷ್ಠೆ. ಧರ್ಮದ ಮತ್ತು ರಾಷ್ಟ್ರದ ಆದರ್ಶಗಳಿಗೆ ತಿಕ್ಕಾಟ ಬಂದರೆ-ಅಂತಹ ಸಂದರ್ಭಗಳಿಗೇನೂ ಕಡಿಮೆಯಿಲ್ಲ - ಅವರ ನಿಷ್ಠೆ ಯಾವ ಕಡೆಗೆ ಓಲುತ್ತದೆ ಎನ್ನುವುದು ಸಂದೇಹಾಸ್ಪದ ವಿಷಯವೇ. ಆದರೆ ಹಿಂದೂವಿನ ಪ್ರಶ್ನೆ ಹಾಗಲ್ಲ. ಅವನ ದೆಹಲಿ, ಕಾಶಿ, ಎರಡೂ ಈ ದೇಶದಲ್ಲಿಯೇ ಇದೆ.'' (ಧರ್ಮಶ್ರೀ; ಪು. 62) ಕೋಮುವಾದಿ ಸಂಘಟನೆಯ ಕರಪತ್ರದಂತಿರುವ ಇಂತಹ ಹೇಳಿಕೆಗಳು ಶಂಕರನ, ಸತ್ಯನ ಮಾತಿನಲ್ಲಿ ಹಲವು ಸಲ ಜೀವ ಪಡೆದುಕೊಳ್ಳುತ್ತವೆ.
ಇಷ್ಟೊಂದು ವ್ಯಾಖ್ಯಾನ ಮಾಡಿ ಶಂಕರನು ನೂರು ಸುತ್ತು ಹಾಕಿದರೂ ಗಂಟು ಒಂದೇ ಎಂಬಂತೆ ದೇಹಲಿ, ಕಾಶಿ ಎರಡೂ ಒಂದೇ ಆಗಿರುವವರು ಮಾತ್ರ ದೇಶೀಯರು ಎನ್ನುವ ತಿಮರ್ಾನಕ್ಕೆ ಬರುತ್ತಾನೆ. ಹೀಗೆ ಕಾಶಿ, ಅಯೋಧ್ಯೆಯ ಮೂಲಕವೇ ದೆಹಲಿಯ ಕುಚರ್ಿಯನ್ನು ಕೋಮುವಾದಿಗಳು ಏರಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ದೆಹಲಿಯ ಎಂದರೆ "ರಾಜಕೀಯ ಪ್ರಭುತ್ವ', ಕಾಶಿ ಎಂದರೆ "ಧಾಮರ್ಿಕ ಪ್ರಭುತ್ವ'. ಇದು ಎರಡೂ ಒಂದೇ ಆಗಿರುವುದು ಹಿಂದೂಗಳಿಗೆ ಮಾತ್ರ. ಇದಕ್ಕೆ ಹೊರತಾದವರು ಹೊರಗಿನವರಾಗುತ್ತಾರೆ. ರಾಷ್ಟ್ರನಿಷ್ಠೆಯ ವಿಷಯದಲ್ಲಿ ಅವರನ್ನು ನಂಬಲಾಗುವುದಿಲ್ಲ. ಅವರು ಹಿಂದೂ ಸಂಸ್ಕೃತಿ, ರಾಮಾಯಣ, ಮಹಾಭಾರತ, ಭಗವದ್ಗೀತೆ ಇತ್ಯಾದಿಗಳ ಶ್ರೇಷ್ಠತೆಯನ್ನೂ ಅದು ಭಾರತೀಯ ಸಂಸ್ಕೃತಿಯ ಜೀವಾಳ ಎಂಬುದನ್ನು ಒಪ್ಪಿಕೊಳ್ಳುವವರು ಮಾತ್ರ ಹಿಂದೂ ಸಮಾಜದ ಒಳಗಿನವರಾಗಿರಬಹುದು. ಅದಲ್ಲದಿದ್ದರೆ ಅಂಥವರು ಎರಡನೇ ದಜರ್ೆ-ಅನುಗ್ರಹಿತ-ಪ್ರಜೆಯಾಗಿ ಇರಬೇಕಾಗುತ್ತದೆ. ಇನ್ನೂ ವಿವರ ಕೇಳಿದ್ದರೆ ಶಂಕರ ಇದೇ ಸ್ಪಷ್ಟನೆಯನ್ನು ಕೊಡಬೇಕಾಗುತ್ತಿತ್ತು.
ಈ ಕಾದಂಬರಿಯಲ್ಲಿ ಆರೆಸ್ಸೆಸ್ ಸಂಘಟನೆಗೆ ಮರುಹುಟ್ಟು ಕೊಡುವ ಕೆಲಸ ಮಾಡುತ್ತಿದ್ದಾರೆ. ಗಾಂಧೀ ಹತ್ಯೆಯ ನಂತರ ಇದು ಅಪರಾಧಿ ಸ್ಥಾನದಲ್ಲಿ ನಿಂತಿತ್ತು. ಕೆಲವು ವರ್ಷ ಸಕರ್ಾರದಿಂದ "ಬ್ಯಾನ್' ಕೂಡ ಆಗಿತ್ತು. ತನ್ನ "ಹಿಂದೂ ರಾಷ್ಟ್ರ ನಿರ್ಮಾಣ'ದ ಉತ್ಸಾಹದಲ್ಲಿ ಅನ್ಯಧರ್ಮವನ್ನು ಈ ದೇಶದಿಂದ ಓಡಿಸುವ ಅಥವಾ ತನ್ನತನ ಬಿಟ್ಟು ನಮ್ಮ ಕೃಪಾಕಟಾಕ್ಷಕ್ಕೆ ಒಳಗಾಗಬೇಕೆಂದು ಒತ್ತಾಯಿಸುವ ಕೆಲಸದಲ್ಲಿ ತಲ್ಲೀನ ಆಗಿತ್ತು. ಆದರೆ ಈ ಯಾವ ವಿವರವೂ ಕಾದಂಬರಿಯಲ್ಲಿಲ್ಲ. ಅನ್ಯ ಮತವನ್ನು ದ್ವೇಷಿಸುತ್ತೇವೆಂದು ""ನಿನಗೆ ಯಾರು ಹೇಳಿದರು ? ನಮ್ಮ ಮೇಲೆ ಇತರರು ಮಾಡುವ ಅಪಪ್ರಚಾರದಿಂದ ಎಲ್ಲರಲ್ಲೂ ಈ ಕಲ್ಪನೆ ಬೆಳೆದಿದೆ.'' (ಅದೇ; ಪು. 61) ಎಂದು ಶಂಕರ ಹೇಳುತ್ತಾನೆ. ಸತ್ಯವನ್ನು ಅಪಪ್ರಚಾರವೆಂದು ತೇಲಿಸಿ ರಾಮಣ್ಣ ನನ್ನ ಇಡೀ ಜೀವನವನ್ನು ರಾಷ್ಟ್ರ ಸೇವೆಗೆ ಕಳೆಬೇಕು ಅಂತ ಆಸೆಯಾಗುತ್ತೆ'' (ಅದೇ; ಪು. 58) ಎನ್ನುವ ಶಂಕರನ ಮಾತು ಮತ್ತು ತಂದೆ ತಾಯಿಗಳ ಮಗನಾಗಿ ನಾನಿದೀನಿ. ರಾಷ್ಟ್ರದ ಮಗನಾಗಿ ಶಂಕರನನ್ನು ಕೊಟ್ಟು ಬಿಟ್ಟಿದೀವಿ (ಅದೇ; ಪು. 58) ಎನ್ನುವ ಅಣ್ಣ ರಾಮಣ್ಣನ ಮಾತಿನ ಮೂಲಕ ಶಂಕರನಿಗೆ (ಆರೆಸ್ಸೆಸ್ ಕಾರ್ಯಕರ್ತ) ದೇಶಸೇವೆಯ ಪಟ್ಟಕೊಡುತ್ತಾರೆ; ಆತನ ಕೆಲಸಗಳನ್ನು ನಿಬ್ಬೆರಗಾಗಿ ನೋಡುವ, ಆದರ್ಶದ ವ್ಯಕ್ತಿಯಾಗಿ ನೋಡುವ ಸತ್ಯನ ಮೂಲಕ ಲೇಖಕರು ಆರೆಸ್ಸೆಸ್ಗೆ ಕಳೆದುಹೋದ ವೈಭವವನ್ನು ಮತ್ತೆ ಕೊಡುತ್ತಿದ್ದಾರೆ ಎನ್ನಿಸುತ್ತದೆ. ಕಾದಂಬರಿಯ ವಸ್ತು ನಿರ್ವಹಣೆ ಇದಕ್ಕೆ ಹೆಚ್ಚು ಪೂರಕವಾಗಿದೆ. ಮತಾಂತರದ ಹೆಸರಿನಲ್ಲಿ ಕ್ರಿಶ್ಚಿಯನ್, ಮುಸ್ಲಿಂ ಕೇಂದ್ರದ ಮೇಲೆ ಆಗಾಗ ಮಾಡುವ ದಾಳಿಗೆ ಒಂದು ಸೈದ್ಧಾಂತಿಕ ಸಮರ್ಥನೆಯಾಗಿ 'ರಾಷ್ಟ್ರ ಮತ್ತು ಸಂಸ್ಕೃತಿಯ' ನಿರ್ವಚನೆ ಇಲ್ಲಿ ನಡೆಯುತ್ತದೆ. ಇಂತಹ ಪ್ರತಿಭಟನೆಗಳು ಅಸಹಿಷ್ಣುತೆ ಅಲ್ಲ. ರಾಷ್ಟ್ರಭಕ್ತಿಯ ಉದಾತ್ತ ಸ್ವರೂಪ ಎನ್ನುವುದು ಇಲ್ಲಿಯ ಸಮರ್ಥನೆ.
ಲಿಲ್ಲಿಯೊಡನೆ ರಾಚಮ್ಮನೊಡನೆ ಮಾತನಾಡುವಾಗಲೆಲ್ಲ ಅವರ ಮಾತುಗಳಿಗೆ ಪ್ರತಿಭಟನೆಯ ರೂಪದಲ್ಲಿಯೇ ಈ ಎಲ್ಲಾ ಮಾತುಗಳು ಬಂದಿವೆ. ಇವೆಲ್ಲವನ್ನು ಪರಸ್ಪರ ಸಂವಾದ-ಚಚರ್ೆ ಎಂದಿಟ್ಟುಕೊಂಡರೂ ಇದರ ಹೊರತಾಗಿ ನೇರವಾಗಿ ಬೀದಿಗಿಳಿದು ಪ್ರತಿಭಟಿಸುವ ಒಂದೆರಡು ಘಟನೆಗಳೂ ಇಲ್ಲಿವೆ.
ಅಮೇರಿಕಾದ ಒಬ್ಬ ಕ್ರಿಶ್ಚಿಯನ್ ಮಿಶನರಿ ಬಂದು ಮತಾಂತರ ಮಾಡುವ ಕೆಲಸದಲ್ಲಿ ತೊಡಗಿದಾಗ ರಾಮಣ್ಣ ಮತ್ತು ಇತರೆ ಗೆಳೆಯರು ಸೇರಿ ಇವತ್ತು ನಾವು ಹೋಗಿ ಗಲಾಟೆ ಮಾಡಿ ಅವನನ್ನು ಓಡಿಸಬೇಕು (ಅದೇ; ಪು. 65) ಎಂದು ತೀರ್ಮಾನಿಸಿ ಹೋಗುತ್ತಾರೆ. ಮಿಷನರಿ ಹಿಪ್ನೋಟಿಸಂ ಮಾಡಿ ರೋಗ ವಾಸಿ ಮಾಡುತ್ತಿದ್ದಾಗ ಸತ್ಯ ಅವನಿಗೆ ಹಲವು ಪ್ರಶ್ನೆ ಕೇಳುತ್ತಾನೆ. ಗಲಾಟೆಯಾಗಿ ಹೊಡೆದಾಟವೂ ಆಗುತ್ತದೆ. ಪಾದ್ರಿ ಊರು ಬಿಡುತ್ತಾನೆ. ಈ ಹುಡುಗರು ನಾವು ಮಾತ್ರ ಎಚ್ಚರವಾಗಿರಾಣ, ಈ ಊರಲ್ಲಿ ಬಾಕಿಯಾವ ಮೊಹಲ್ಲಾದಲ್ಲೂ ಅವರು ಶುರುಮಾಡದ ಹಾಗೆ ನೋಡ್ಕತ್ತಿರಾಣ (ಅದೇ; ಪು. 72) ಎಂದು ಪೋಲೀಸು ಕೆಲಸಕ್ಕೆ ತೊಡಗುತ್ತಾರೆ. ಇನ್ನೂ ಇಂಥ ಹುಡುಗ್ರು ಇರೋದ್ರಿಂದ್ಲೆ ನಮ್ಮ ಧರ್ಮ ಉಳಕೊಂಡಿದೆ (ಅದೇ; ಪು. 75) ಎನ್ನುವ ತೀಮರ್ಾನಕ್ಕೆ ಬರುತ್ತಾರೆ. ಇನ್ನೊಂದು ಪ್ರಸಂಗ ಹಾಲಿನ ಪೌಡರಿನದು. ಅನಾಥಾಲಯಕ್ಕೆ ಅಮೇರಿಕಾದ ಹಾಲಿನ ಪುಡಿಕೊಡುತ್ತಿರುವುದನ್ನು ವಿರೋಧಿಸುತ್ತಾನೆ ಸತ್ಯ. ಜಿಡ್ಡುತೆಗೆದ ಹಾಲಿನ ಪುಡಿಯನ್ನು ಕೊಟ್ಟಿರುವುದು ಅಮೇರಿಕಾ ದೇಶವಾದರೂ, ಹಂಚುವುದು ಚಚರ್ಿನ ಕೆಲಸ. ಈ ಮೂಲಕ ಚಚರ್ಿನ ಪ್ರತಿಷ್ಠೆ ಬೆಳೆಯಬೇಕು. ಹಾಲಿನ ಪುಡಿಗೆ ಹೋದ ಎರಡನೆಯ ವಾರವೇ ನಮಗೆಲ್ಲಾ ಬೈಬಲ್ ಹಂಚಿದಾರೆ. ನಮ್ಮ ಮತಕ್ಕೆ ಮಂದಿಯನ್ನು ಹಿಡಿದು ತುಂಬಲು ಅದೆಷ್ಟು ಬಗೆಯ ಸಾಧನಗಳನ್ನು ಉಪಯೋಗಿಸುತ್ತಾರೆ! ಮಾರ್ಗವನ್ನು ಹುಡುಕುತ್ತಾರೆ! (ಅದೇ; ಪು. 79) ಎಂದು ಸಿಟ್ಟಾದ ಸತ್ಯ ಶಂಕರ ಮತ್ತಿತರರೊಂದಿಗೆ ಸೇರಿ ಮಾರನೆಯ ದಿನವೇ ಚಚರ್ಿನಿಂದ ಕಳುಹಿಸಲ್ಪಟ್ಟ ಹಾಲಿನ ಪುಡಿಯ ಡಬ್ಬಗಳನ್ನೆಲ್ಲಾ ಜಟಕಾದಲ್ಲಿ ತುಂಬಿಸಿಕೊಂಡು, ಬೈಬಲ್ಲಿನ ಪ್ರತಿಗಳ ಕಟ್ಟುಗಳನ್ನು ಚಚರ್ಿಗೆ ಹಿಂದಕ್ಕೆ ಕಳುಹಿಸುತ್ತಾರೆ. ಅದರೊಟ್ಟಿಗೆ ಭಗವದ್ಗೀತೆಯ ಒಂದು ಪ್ರತಿಯನ್ನು ಇಟ್ಟಿರುತ್ತಾರೆ. ಇದು ಮಹತ್ವದ ಅಂಶ. ಇದು ಕೇವಲ ಬೈಬಲ್ಗೆ ಪ್ರತಿಯಾಗಿ ಹೂಡಿದ ಪ್ರತಿಭಟನೆ ಮಾತ್ರವಲ್ಲ. ಅದರ ಬದಲಾಗಿ ಬೈಬಲ್ನ ಜಾಗದಲ್ಲಿ ಯಾವುದು ಇರಬೇಕು ? ನೀವು (ಇತರ ಭಾರತೀಯರು ಸೇರಿದಂತೆ) ಗೌರವಿಸಬೇಕಾದ ಮತ್ತು ಪ್ರತಿಷ್ಠಾಪಿಸಬೇಕಾದ ಪ್ರತಿ (ಭಗವದ್ಗೀತೆ) ಯಾವುದು ಎಂಬುದನ್ನು ಸೂಚಿಸುತ್ತದೆ. ಭಗವದ್ಗೀತೆಯು ಎಷ್ಟು ಜನರ ಒಪ್ಪಿತ ಗ್ರಂಥ ? ಭಾರತದ ಬಹುಸಂಖ್ಯಾತರಿಗೆ ಇದರ ಬಗ್ಗೆ ಗೊತ್ತೇ ಇಲ್ಲವಲ್ಲಾ ! ಭಗವದ್ಗೀತೆಯ ಬದಲು ಮಂಟೆಸ್ವಾಮಿಯ ಕಾವ್ಯವನ್ನು ಯಾಕೆ ಇಟ್ಟಿಲ್ಲ ?
ಅರ್ಥಹೀನ ತೊಳಲಾಟ
ಕಾದಂಬರಿಯ ಇನ್ನೊಂದು ಮುಖ್ಯ ಪಾತ್ರ ಲಿಲ್ಲಿಯದು. ಆಕೆ ದೇವಪ್ರಸಾದನ ತಂಗಿ. ಕಟ್ಟಾ ಕ್ರಿಶ್ಚಿಯನ್ಳಾಗಿ ಆಕೆಯ ಪ್ರವೇಶ. ಆಕೆ ಈ ದಿನ ನೂತನವಾದ, ನೂರಕ್ಕೆ ನೂರು ಭಾಗ ಐರೋಪ್ಯ ಸ್ತ್ರೀಯರ ಉಡುಗೆಯಲ್ಲಿದ್ದಳು. ಸರ್ಕಸ್ನಲ್ಲಿ ಬರುವ ತಮಾಷೆಯ ವೇಷದಂತೆ ಕಾಣುತ್ತಿತ್ತು. ನೋಡಿ ನನಗೆ ನಗೆ ತಡೆಯಲಾರದಷ್ಟು ನಗು ಬಂತು. ನಕ್ಕು ಬಿಟ್ಟೆ (ಅದೇ; ಪು. 114-15) ಇಲ್ಲಿ ಸಹಜ ವ್ಯಂಗ್ಯ ಮತ್ತು ಅವಳ ವೇಷ ಭೂಷಣದ ಬಗೆಗಿರುವ ವಿರೋಧವನ್ನು ಗುರುತಿಸಬಹುದು. ಅವಳೋ ಬುದ್ಧಿವಂತೆಯಲ್ಲದಿದ್ದರೂ ಕ್ರಿಶ್ಚಿಯಾನಿಟಿಯಲ್ಲಿ ಅಂಧಃಶೃದ್ಧೆ ಉಳ್ಳವಳು. ಹಿಂದೂ ಧರ್ಮದ ಬಗ್ಗೆ ಸಾಕಷ್ಟು ಪೂರ್ವಗ್ರಹ ಇಟ್ಟುಕೊಂಡೇ ಸತ್ಯನೊಡನೆ ಚಚರ್ೆಗೆ ಬರುತ್ತಾಳೆ. ಕ್ರಿಶ್ಚಿಯನ್ ಧರ್ಮದಲ್ಲಿಯ ಅವೈಜ್ಞಾನಿಕತೆಯ ಬಗ್ಗೆ ವಿವರವಾಗಿ ಹೇಳಿ ಜೀವಶಾಸ್ತ್ರ ಇಷ್ಟು ಮುಂದುವರಿದಿರುವ ಈ ಕಾಲದಲ್ಲಿಯೂ ನೀವು, ಕ್ರೈಸ್ತನು ಕುಮಾರಿ ಮೇರಿಯ ಹೊಟ್ಟೆಯಲ್ಲಿ ಹುಟ್ಟಿದನೆಂದು ಹೇಗೆ ನಂಬುವಿರಿ? ಶುದ್ಧ ಜ್ಞಾನದ ದೃಷ್ಟಿಯಿಂದ ನೋಡಿದರೆ ಮೂಢನಂಬಿಕೆಗಳೂ ಅಂಧನಂಬಿಕೆಗಳೂ ಬೈಬಲಿನಲ್ಲಿ ಲೆಕ್ಕವಿಲ್ಲದಷ್ಟಿವೆ (ಅದೇ; ಪು. 117) ಈ ವಾದ ಕೇಳಿ ಲಿಲ್ಲಿ ದಂಗುಬಡಿದು ಹೋಗುತ್ತಾಳೆ. ಇಂತಹ ವಾದ ಸರಣಿಯನ್ನು ಇದೇ ಮೊದಲ ಸಲ ಅವಳು ಕೇಳುತ್ತಿದ್ದಳು. (ಹಾಗಾಗಿಯೇ ಆಕೆ ರಾಮ-ಲಕ್ಷ್ಮಣ ಪಾಯಸದಿಂದ ಹೇಗೆ ಹುಟ್ಟಿದರು? ಸಲಿಂಗಿಗಳಾದ ಶಿವ, ವಿಷ್ಣುವಿನಿಂದ ಅಯ್ಯಪ್ಪ ಹೇಗೆ ಹುಟ್ಟಿದ? ಅದು ಅವೈಜ್ಞಾನಿಕ ಅಲ್ಲವೇ ಎಂದು ಕೇಳುವುದಿಲ್ಲ). ಹಿಂದೂ ಧರ್ಮದ ಜಾತಿ, ವರ್ಣ, ಅಸ್ಪೃಶ್ಯತೆಯ ಬಗ್ಗೆ ಕೇಳಿದಾಗ ಈ ಮೂಢ ನಂಬಿಕೆಗಳನ್ನು ವೈಜ್ಞಾನಿಕ (ರ್ಯಾಶನಲ್) ಗೊಳಿಸುತ್ತಾನೆ. ಅವನ ವಾದವ ಮುಂದೆ ಲಿಲ್ಲಿ ನಿಸ್ತೇಜಳಾಗುತ್ತಾಳೆ. ಈತ ಹೇಳಿದ ಹಲವು ಪುಸ್ತಕಗಳನ್ನು ಲಿಲ್ಲಿ ಓದುತ್ತಾಳೆ. ಅವಳಿಗೆ ಕ್ರಿಸ್ತ ಧರ್ಮದ ನಂಬಿಕೆಯಲ್ಲಿ ಅನೇಕ ಬಿರುಕುಗಳು ಕಾಣಿಸಿಕೊಳ್ಳುತ್ತವೆ. ಸತ್ಯ ಮತ್ತು ಲಿಲ್ಲಿ ಹತ್ತಿರವಾಗುತ್ತಾರೆ. ಲಿಲ್ಲಿಯಲ್ಲಿ ಸತ್ಯನಿಗೆ ಪ್ರೀತಿ ಬೆಳೆಯುತ್ತದೆ. ಅವರ ಮನೆಯಲ್ಲಿ ಊಟ ಮಾಡುವಷ್ಟು ಪರಿವರ್ತನೆಯಾಗುತ್ತಾನೆ. ಆಕೆಗೆ ಹಿಂದೂ ಧರ್ಮದ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಆಕೆ ಕ್ರಿಶ್ಚಿಯನ್ ತತ್ವದಿಂದ ದೂರವಾದಷ್ಟು ಸತ್ಯನಿಗೆ ಹತ್ತಿರವಾಗುತ್ತಾಳೆ. ಒಂದು ಸಂದರ್ಭದಲ್ಲಿ ನನ್ನ ಮೈಯಲ್ಲಿ ಹರಿಯುವ ರಕ್ತಕ್ಕೂ ನಿಮ್ಮ ಮೈಯಲ್ಲಿರುವ ರಕ್ತಕ್ಕೂ ಅನುವಂಶಿಕವಾಗಿ ಏನೂ ಹೆಚ್ಚು ವ್ಯತ್ಯಾಸವಾಗಿಲ್ಲ (ಅದೇ; ಪು. 132) ಎನ್ನುತ್ತಾನೆ. ಮಾತೃಧರ್ಮಕ್ಕೆ ಮರಳಿ ಬನ್ನಿ ಎನ್ನುವ ಸಾಕ್ಷ ಇಲ್ಲಿದ್ದಂತಿದೆ. ಸತ್ಯನ ಮಾರ್ಗದರ್ಶನದಲ್ಲಿ ಲಿಲ್ಲಿ ಬದಲಾಗುತ್ತಾಳೆ. ಅವಳು ಸೀರೆ ಉಡುತ್ತಾಳೆ. ಕುಂಕುಮ ಇಡುತ್ತಾಳೆ. ಜಡೆ ಹಾಕಿಕೊಳ್ಳುತ್ತಾಳೆ. ಹೀಗಿದ್ದರೆ ನೀವು ನಿಜವಾಗಿಯೂ ಚೆನ್ನಾಗಿ ಕಾಣುತ್ತೀರಿ (ಅದೇ; ಪು. 146) ಎಂದು ಹೇಳುತ್ತಾನೆ ಸತ್ಯ. (ರಾಚಮ್ಮ ಕೂಡ ಕುಂಕುಮ ಇಟ್ಟಿದ್ದರೆ ಚೆನ್ನಾಗಿತ್ತು ಎಂದು ಹಿಂದೆ ಅಂದುಕೊಂಡಿದ್ದ.) ಇನ್ನೊಂದು ದಿನ ಅವಳು ನನ್ನನ್ನು 'ಲಿಲ್ಲಿ' ಅನ್ನಬೇಡಿ ಲೀಲಾ ಎನ್ನಿ ಎನ್ನುತ್ತಾಳೆ. ಆದರೆ ಆತ ಲಿಲ್ಲಿ ಎಂದೇ ಚಂದ ಎಂದು ಹಾಗೆ ಕರೆಯುತ್ತಾನೆ. ಮುಖ್ಯವಾದ ಸಂಗತಿಯೆಂದರೆ ಲಿಲ್ಲಿಯ ಬದಲಾವಣೆ ಕ್ರಿಶ್ಚಿಯನ್ ಸಂಸ್ಕೃತಿಯಿಂದ ದೂರವಾಗುವುದಾದರೆ, ಅದನ್ನು ಸ್ವೀಕರಿಸುವ ಬದಲಾವಣೆ ಸತ್ಯನದು.
ಆದರೆ ಇಲ್ಲೊಂದು ಧರ್ಮಸಂಕಟ ಎದುರಾಗುತ್ತದೆ. ನಿಮ್ಮಿಂದಾಗಿ ನನ್ನ ಜೀವನದಲ್ಲಿ ಹೊಸದೃಷ್ಟಿ ಬೆಳೀತು. ಹಿಂದೂ ಧರ್ಮ, ಹಿಂದೂ ಸಂಸ್ಕೃತಿಯ ವಿಷಯದಲ್ಲಿ ನನಗೆ ಹುಚ್ಚು ಹಿಡೀತು...............ಕೆಲವು ದಿನ ಯೋಚಿಸಿದೆ: ನಾನು ಹಿಂದೂ ಹೆಂಗಸಾಗಿ, ಹಣೆಗೆ ಕುಂಕುಮವಿಟ್ಟು, ಕೆನ್ನೆಗೆ ಅರಶಿನ ತೊಡೆದು, ನಿಮ್ಮ ಹೆಂಡತಿಯಾದರೆ!.............. ಆದರೆ ನಾನು ಹಿಂದೂವಾಗಲಾರೆ. ಹಿಂದೂ ಮತ ನನ್ನನ್ನು ಒಪ್ಪಿಕೊಳ್ಳುಲ್ಲ. ನಿಮ್ಮ ಹೆಂಡತಿಯಾಗುವ ಸೌಭಾಗ್ಯ ನನಗಿಲ್ಲ. (ಅದೇ; ಪು. 172) ಲಿಲ್ಲಿಯದು ಕೇವಲ ಪ್ರೀತಿಯ ಸಮಸ್ಯೆ ಮಾತ್ರವಲ್ಲ. ಹಿಂದೂ ಮತದ ಎಲ್ಲ ಅಂಶ ಮೆಚ್ಚಿದ್ದಾಳೆ. ಆದರೂ ಹಿಂದೂ ಆಗಲಾರಳು.
ಹಲವು ತುಮುಲ, ತಳಮಳಗಳ ನಡುವೆ ಸತ್ಯ ಲಿಲ್ಲಿಯನ್ನು ಮದುವೆ ಆಗುವ ಕಾರಣದಿಂದ ಕ್ರೈಸ್ತನಾಗುತ್ತಾನೆ. ಲಿಲ್ಲಿಯನ್ನು ಮದುವೆಯಾಗುತ್ತಾನೆ. ಹೀಗೆ ಮದುವೆಯಾಗಲು ಎರಡು ಕಾರಣವಿದೆ. ಒಂದು: ಲಿಲ್ಲಿಗೆ ಹಿಂದೂ ಧರ್ಮಕ್ಕೆ ಬರುವ ವ್ಯವಸ್ಥೆ ಇಲ್ಲ. ಎರಡು: ದೇವಪ್ರಸಾದ ಸೂಚಿಸುವ ಹಾಗೆ ಎರಡೂ ಧರ್ಮವನ್ನು ಬಿಟ್ಟು ರಜಿಸ್ಟರ್ಡ್ ಮದುವೆ ಆದರೆ ಅತಂತ್ರವಾಗಿಬಿಡಬೇಕಾಗುತ್ತದೆ. ಹಾಗಾಗಿ ಸದಾ ತಾನು ದ್ವೇಷಿಸುತ್ತಿದ್ದ ಕ್ರೈಸ್ತ ಧರ್ಮವನ್ನು-ತಾತ್ವಿಕವಾಗಿ ಒಪ್ಪಿಕೊಳ್ಳದೆಯೂ- ಅಪ್ಪಿಕೊಳ್ಳುತ್ತಾನೆ.
ಲಿಲ್ಲಿಯ ತಂದೆಯ ಸಹಾಯದಿಂದ ಈಗ ಸತ್ಯ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ಪ್ರಿನ್ಸಿಪಾಲನಾಗಿದ್ದಾನೆ. ಈಗ ಅವನದೇ ವಿದ್ಯಾಥರ್ಿಗಳು ಬೆಳಿಗ್ಗೆ ಶಾಲೆಯಲ್ಲಿ ಬೈಬಲ್ನ ಪ್ರಾರ್ಥನೆಯನ್ನು ಎಲ್ಲಾ ಧರ್ಮದವರಿಗೆ ಕಡ್ಡಾಯಗೊಳಿಸಿರುವುದರ ವಿರುದ್ಧ ದಂಗೆ ಏಳುತ್ತಾರೆ. ಆದರೆ ಬಿಷಪ್ಪ ಅವರನ್ನೆ ಅನಾಗರಿಕರೆಂದು ಕರೆದು ಅವರನ್ನು ಬೈಬಲ್ ಪ್ರಾರ್ಥನೆಯಿಂದ ಸುಸಂಸ್ಕೃತರನ್ನಾಗಿ ಮಾಡುವ ಕೆಲಸವನ್ನು ಸತ್ಯನಿಗೇ ವಹಿಸುತ್ತಾನೆ.
ಮದುವೆ ಆದ ದಿನದಿಂದ ಸತ್ಯ ಮಾನಸಿಕ ಅಸ್ವಸ್ಥತೆಗೆ ಒಳಗಾಗುತ್ತಾನೆ. ಆಂತರಂಗಿಕ ಅಪೇಕ್ಷೆ ಮತ್ತು ಬಹಿರಂಗದ ಕಾಯರ್ಾಚರಣೆ ಭಿನ್ನವಾಗಿದೆ. ಮನೆಗೆ ಬಂದು ಮಂಚದಲ್ಲಿ ಒರಗುತ್ತಾನೆ. ಗೋಡೆಯ ಮೇಲೆ ಕಣ್ಣಾಡಿಸಿದಾಗ ಅಲ್ಲಿ ತುಂಬಿರುವುದು ಅವನ ಸಂಸ್ಕೃತಿಗೆ ಹೊರತಾದ ಚಿತ್ರಪಟ. ಮೇರಿ, ಶಿಲುಬೆಗೆ ಏರಿಸುತ್ತಿರುವ ಕ್ರಿಸ್ತನ ಪಟ, ಕ್ರಿಸ್ತನ ರಕ್ತ ಉಕ್ಕುತ್ತಿರುವ ಪಟ. ಅಲ್ಲಿ ಕಾಣುವ ಕ್ರೌರ್ಯ, ಅನಾಗರಿಕತೆ ಅದನ್ನೆಲ್ಲಾ ಸಹಿಸಿದ ಕ್ರಿಸ್ತನು ಮಹಾತ್ಮನೆಂಬುದು ನಿಜ. ಆದರೆ ಈ ಚಿತ್ರಗಳನ್ನು ನೋಡಿದರೆ ಮನಸ್ಸಿನಲ್ಲಿ ಹುಟ್ಟುವುದು ಜಿಗುಪ್ಸೆ; ಶಾಂತಿಯಲ್ಲ. ಅನಾಗರಿಕ ಜನಾಂಗವೊಂದು ಇತಿಹಾಸದ ಒಂದುಮಟ್ಟದಲ್ಲಿ ಇದ್ದ ಸ್ಥಿತಿಯನ್ನು ಈ ಚಿತ್ರಗಳು ರೂಪಿಸುತ್ತವೆ. ಭಾರತೀಯನಾದ ನನಗೆ ಅದು ಮೆಚ್ಚುಗೆ ಉಂಟುಮಾಡುಲ್ಲ ................ ನನ್ನ ದೇಶದ ಸೃಷ್ಟಿಯಾದ ಬುಧ್ಧನ ಮುಖದಲ್ಲಿ ಇರುವುದು ನೋವಲ್ಲ, ಶಾಂತಿ. ಕೈಲಾಸದ ಪ್ರಶಾಂತತೆಯನ್ನೇ ಬಿಂಬಿಸುವ ಶಿವ, ಅನಂತ ವಾತ್ಸಲ್ಯವನ್ನು ಬೀರುವ ತಾಯಿ ಲಕ್ಷ್ಮಿ-ಸರಸ್ವತಿಯರು, ಚಿರಶಾಂತಿ ಸಮಾಧಿಯಲ್ಲಿ ಮುಳುಗಿರುವ ಗೊಮ್ಮಟೇಶ್ವರನ ವಿಗ್ರಹಗಳು ನನಗೆ ಸಲ್ಲುತ್ತವೆ. (ಅದೇ; ಪು.213-14) ಹೀಗೆ ಅವನ ಪೂರ್ವ ಸಂಸ್ಕಾರ ಅವನನ್ನು ಕಾಡುತ್ತದೆ. ಇಲ್ಲಿಯೂ ಅತಾಕರ್ಿಕವಾದ ವಾದ ಸರಣಿಯೇ ಮುಂದುವರಿಯುತ್ತದೆ. ಕ್ರಿಶ್ಚಿಯನ್ ಆಗುವ ಪೂರ್ವದ ಮನಸ್ಥಿತಿಗಿಂತ ಹೆಚ್ಚು ಗಾಢವಾಗಿ ವೈದಿಕ ಪರಂಪರೆ ಅವನಿಗೆ ಮಹತ್ವವಾಗಿ ಕಾಣಲು ಪ್ರಾರಂಭಿಸುತ್ತದೆ. ಇವನ ಈ ಮನಃಕ್ಲೇಶ ನೋಡಿ ಲಿಲ್ಲಿ ಈ ಎಲ್ಲಾ ಪಟ ತೆಗೆದು ಹಿಂದೂ ದೇವರ, (ವೈದಿಕ ದೇವರನ್ನು ಮಾತ್ರ ; ದಲಿತ ದೇವರನ್ನಲ್ಲ) ವಿವೇಕಾನಂದರ ಪಟ ಹಾಕುತ್ತಾಳೆ. ಇದಕ್ಕಾಗಿ ಆಕೆ ತಂದೆಯಿಂದ ಬೈಸಿಕೊಳ್ಳುತ್ತಾಳೆ. ರಾತ್ರಿಯಿಡಿ ಯೋಚಿಸಿ ಕೊನೆಗೆ ಆದರ್ಶ, ಸಂಸ್ಕಾರ ಇದನ್ನೆಲ್ಲಾ ಹೊಡೆದುಹಾಕಿ ನೆಮ್ಮದಿಯಿಂದ ಬದುಕುವ ನಿಧರ್ಾರಕ್ಕೆ ಬರುತ್ತಾನೆ.
ಈ ಸಂದರ್ಭದಲ್ಲಿಯೇ ಯಾರಾದರೂ ಅಶಿಕ್ಷಿತರು, ಹಿಂದೂ ಧರ್ಮವನ್ನು ಏನೂ ಅರಿಯದಿದ್ದವರು ತನ್ನ ಧರ್ಮವನ್ನು ಬಿಟ್ಟು ಅನ್ಯಧರ್ಮಕ್ಕೆ ಸೇರಿದ್ದರೆ ಆಶ್ಚರ್ಯವಿರುತ್ತಿರಲಿಲ್ಲ'' (ಅದೇ; ಪು.277) ಎಂದು ಶಂಕರನ ದೀರ್ಘ ಪತ್ರ ಬರುತ್ತದೆ. ಸತ್ಯನ ಮನಸ್ಸು ಮತ್ತೆ ಛಿದ್ರವಾಗುತ್ತದೆ. ಪ್ರಕರವಾದ ಸಂಘರ್ಷ, ಆದರ್ಶ ಮತ್ತು ವಾಸ್ತವದ ನಡುವಿನ ಕರ್ಷಣ. ನನಗೆ ಈಗ ಜೀವನದಲ್ಲಿ ಯಾವ ಆಕರ್ಷಣೆಯೂ ಕಾಣಿಸುತ್ತಿರಲಿಲ್ಲ; ಬದಕುವ ಪ್ರವೃತ್ತಿಯೂ ಕಡಿಮೆಯಾಗುತ್ತಿತ್ತು.......... ತನ್ನೊಳಗೆ ಇಬ್ಭಾಗವಾಗಿ ಹೋರಾಡುವುದು. ನಾನೊಬ್ಬ ನಿಶ್ಚೇಷ್ಟಿತ, ದುರ್ಬಲಸಾಕ್ಷಿಯಾಗಿ ಅದನ್ನು ನೋಡುತ್ತಿದ್ದೆ'' (ಅದೇ ; ಪು. 229) ಸದಾ ಹಾಸಿಗೆಯಲ್ಲಿ ಮಲಗಿಯೇ ಕಳೆಯುತ್ತಾನೆ. ಅನಾರೋಗ್ಯದಿಂದ ರಜಾ ಹಾಕುತ್ತಾನೆ. ಅವನಲ್ಲಿರುವ ಬದುಕುವ ಆಶೆ ಸಂಪೂರ್ಣವಾಗಿ ನಶಿಸಿ ಹೊಗಿತ್ತು.
ಸತ್ಯನಂತಹ ಹಿಂದೂ ಮೂಲಭೂತವಾದಿ ಮತ್ತು ಅನ್ಯ ಧರ್ಮದ ಕುರಿತ ಪೂವರ್ಾಗ್ರಹ ಪೂರಿತ ಮನಸ್ಸಿನ ವ್ಯಕ್ತಿತ್ವಕ್ಕೆ ಈ ತಳಮಳ ಸ್ವಾಭಾವಿಕವಾಗಿದೆ. ಕಟ್ಟಾ ಹಿಂದೂವೊಬ್ಬ ಒತ್ತಡದ ಕಾರಣದಿಂದ ಇನ್ನೊಂದು ಧರ್ಮವನ್ನು ಸೇರಿದರೆ ಜೀವವಿದ್ದು ಬದುಕಲಾರದ ಸ್ಥಿತಿ ಬಂದೊದಗಬಹುದೆನ್ನುವ ಗುಪ್ತ ಎಚ್ಚರಿಕೆ ಇಲ್ಲಿ ಇಲ್ಲದಿಲ್ಲ. ಯಾಕೆಂದರೆ ಮತಾಂತರ ಆಗಿದ್ದೇನೆ ಅನ್ನುವುದನ್ನು ಬಿಟ್ಟರೆ ಮತ್ಯಾವ ವ್ಯತ್ಯಾಸವೂ ಅವನ ಬದುಕಿನಲ್ಲಿ ಆಗಿರಲಿಲ್ಲ.
ತಂದೆ ಸಾಯುವಾಗ ಬಾಯಲ್ಲಿ ನೀರು ಬಿಡುತ್ತಾನೆ. ಆದರೆ ನೀರು ಗಂಟಲಿಗೆ ಹೋಗದೆ ಹೊರಬರುತ್ತದೆ. ತಂದೆ ಅಂತಹ ಪ್ರಜ್ಞಾಹೀನ ಸ್ಥಿತಿಯಲ್ಲೂ ಕ್ರೈಸ್ತನಾಗಿ ಪರಿವತರ್ಿತನಾದ ಮಗನು ಬಾಯಿಗೆ ಬಿಡುವ ಕೊನೆಯ ನೀರ ಹನಿಯನ್ನು ತಿರಸ್ಕರಿಸಿದ ಎಂದು ಸತ್ಯ ಗ್ರಹಿಸುತ್ತಾನೆ. ಊರವರು ತಂದೆಯ ಚಿತೆಗೆ ಬೆಂಕಿ ಇಡಲು ಕೊಡುವುದಿಲ್ಲ.
ತಂದೆ/ತಾಯಿ ಜೀವಂತ ಇರುವಾಗ ನೋಡಲು ಒಮ್ಮೆಯೂ ಬರದ, ತಾಯಿ ತೀರಿಕೊಂಡಾಗ ತಂಗಿ ಒಂಟಿಯಾಗಿದ್ದರೂ ನೋಡಲು ಬರದ ಸತ್ಯನಿಗೆ ಈಗ ತಂದೆ, ತಾಯಿ ಕಾಡಲು ಪ್ರಾರಂಭವಾಗುವ ವ್ಯಂಗ್ಯವನ್ನು ಗ್ರಹಿಸಬೇಕು.
ಮನೆಗೆ ಬಂದಾಗಲೂ ಈ ಆಲೋಚನೆಯಿಂದ ದೂರವಾಗುವುದಿಲ್ಲ. ಲಿಲ್ಲಿಗೆ ಬೈಯುತ್ತಾನೆ. ಯಾವ ಕೆಲಸ ಮಾಡಿದರೂ ತಪ್ಪು ಕಂಡುಹಿಡಿಯುತ್ತಾನೆ. ಒಂದು ಕ್ಷಣದಲ್ಲಿ ತಪ್ಪಿನ ಅರಿವಾಗುತ್ತದೆ. ಮತ್ತೆ ಅದೇ ತಪ್ಪು ಮಾಡುತ್ತಾನೆ. ಆತನ ಮಾನಸಿಕ ತುಮುಲದಿಂದಾಗಿ ತನ್ನ ಮೇಲಿನ ಹಿಡಿತವನ್ನು ತಾನೇ ಕಳೆದುಕೊಳ್ಳುವ ಪರಿಯನ್ನು ಇಲ್ಲಿ ದೀರ್ಘವಾಗಿಯೇ ವಿವರಿಸುತ್ತಾರೆ.
ಒಮ್ಮಿಂದೊಮ್ಮೆಲೆ ಆತನಿಗೆ ತಂಗಿಯನ್ನು ನೋಡುವ ನೆನಪಾಗಿ ಹೋಗುತ್ತಾನೆ. ಅಲ್ಲಿ ಸತ್ಯನ ತಂದೆಯ ತಿಥಿ ನಡೆದಿದೆ. ಈತನನ್ನು ಯಾರೂ ಕರೆಯದಿದ್ದರೂ ಆತ ಅಲ್ಲಿ ತಲುಪುತ್ತಾನೆ. ನೋಡಿ ಋಣ ಇರೋ ಹೊತ್ತಿಗೆ ನಿಮ್ಮನ್ನು ಎಳೆದುಕೊಂಡು ಬಂದಿದೆ. ಋಣಾನುಬಂಧ ಅನ್ನೊದು ಯಾರು ತಪ್ಪಿಸೋಕೆ ಆಗುತ್ತೆ ಹೇಳಿ? (ಅದೇ;ಪು.250) ಎಂದು ಗೌಡ ಹೇಳುವ ಮಾತು ಹಿಂದೂ ಧರ್ಮದ ಋಣಾನುಬಂಧದ ತತ್ವವನ್ನು ಜ್ಞಾಪಿಸುವಂತಹುದು.
ಸತ್ಯ ಬ್ರಾಹ್ಮಣ ಜಾತಿಯನ್ನು ಬಿಟ್ಟರೂ ಬ್ರಾಹ್ಮಣ್ಯ ಆತನನ್ನು ಬಿಡಲಾರದು. ಅದು ನೈಸಗರ್ಿಕ, ಶಾಶ್ವತವಾದದ್ದು ಎನ್ನುವ ವಾದ ಬೆಳೆಸುತ್ತಾರೆ. ಅದಕ್ಕೆ ಕಾದಂಬರಿ ಒಪ್ಪುವ ಪ್ರಸಂಗವೆಂದರೆ ಅಪ್ಪನ ವೈಕುಂಠ ಸಮಾರಾಧನೆ. ಆತನಿಗೆ ಗೊತ್ತಿರಲಿಲ್ಲ. ಆದರೆ ಆತನಿಗೆ ಹೋಗಬೇಕೆನ್ನಿಸಿತು. ಮುಂಜಾನೆಯೇ ಹೊರಟು ಬಂದಿದ್ದ. ಇದು ಹಿಂದೂ ಧರ್ಮದ ಋಣಾನುಬಂಧ ಆತನಿಗೆ !
ಅಸ್ವಸ್ಥನಾದ ಸತ್ಯನನ್ನು ಬೇಲೂರಿಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ದೇವಾಲಯವನ್ನು ನೋಡಿ ಮತ್ತೆ ಕನವರಿಸುತ್ತಾನೆ. ""ಆದರೆ ನಮ್ಮ ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳಿಗೆ ಬೇಲೂರು ಕೇವಲ ಪ್ರೇಕ್ಷಣಿಯ ಸ್ಥಳವಾಗಿ ಉಳಿದೀತು. ಇದು ನಮ್ಮದೆಂಬ ಅಭಿಮಾನದಿಂದ, ಉತ್ಸುಕತೆಯಿಂದ ನಮ್ಮ ಮಕ್ಕಳು ಅದರ ಮಹತ್ತನ್ನು ಗುರುತಿಸಲಾರವು............ ಭಾರತೀಯವಾದ ಯಾವುದೇ ಸಾಹಿತ್ಯ, ಸಂಗೀತ, ನೃತ್ಯ ಕಲೆಯ ಪ್ರಕಾರಕ್ಕಾಗಲಿ ನಾವು ಹೊರಗಿನವರಾಗುತ್ತೇವೆ. ನನ್ನ ವಂಶದ ಮಕ್ಕಳು ಕಲಿಯುವುದು ಚಚರ್ಿನಲ್ಲಿ ಹೇಳುವ ಪಿಯಾನೋ ರಾಗವನ್ನ...................... "ಬೇಲೂರು ನನ್ನದಲ್ಲ; ನನ್ನ ವಂಶಕ್ಕೆ ಸೇರಿದ್ದಲ್ಲ. ಭಾರತದ ಭವ್ಯ ಪರಂಪರೆಯು ನನ್ನ ಮಕ್ಕಳ ಹೆಮ್ಮೆಯ ಸ್ವತ್ತಾಗಿ ಉಳಿಯುವುದಿಲ್ಲ''' (ಅದೇ; ಪು. 261-62) ಎನ್ನುತ್ತಾನೆ. (ಇತ್ತೀಚಿನ ಅವರ 'ಆವರಣ' ಕೃತಿಯಲ್ಲಿಯೂ ಇದೇ ರೀತಿಯ ಹಳಹಳಿಕೆಯ ಮಾತುಗಳಿವೆ.
ಇಲ್ಲಿ ಸತ್ಯನ ಮಾನಸಿಕ ತೊಳಲಾಟ ದಿನದಿಂದ ದಿನಕ್ಕೆ, ಘಟನೆಯಿಂದ ಘಟನೆಗೆ ಹೆಚ್ಚುತ್ತಾ ಹೋಗುವುದನ್ನು ಗಮನಿಸಬಹುದು. ಅವುಗಳಲ್ಲಿ ವೈವಿಧ್ಯತೆ ಕೂಡ ಇದೆ; (ಸಾಮಾಜಿಕವಾದುದು, ಪ್ರಾಚೀನ ಕರ್ಮ ಸಿದ್ಧಾಂತಕ್ಕೆ ಸಂಬಂಧಿಸಿದ್ದು, ಬಂಧುತ್ವಕ್ಕೆ ಸಂಬಂಧಿಸಿದ್ದು ಇತ್ಯಾಧಿ) ಇವು ಸತ್ಯನಿಗೆ ಇದೇ ಸ್ಥಿತಿಯಲ್ಲಿ ಮುಂದುವರಿಯಲಾರದಂತೆ ನಿರ್ಬಂಧವನ್ನು ಹೇರುತ್ತವೆ. ಇಲ್ಲಿ ಲಿಲ್ಲಿಯನ್ನು ಮರೆತು ಏಕಮುಖವಾದ ಒತ್ತಡ ಹೇರಿ ಇದ್ದ ಸ್ಥಿತಿಯನ್ನು ಅಸಹ್ಯ, ಅಸಾಧ್ಯಗೊಳಿಸುವ ತಂತ್ರ ಪ್ರಯೋಗ ಮಾಡಲಾಗಿದೆ.
ಲೇಖಕ ಭೈರಪ್ಪನವರ ಅನೇಕ ಕಾದಂಬರಿಗಳ ತಂತ್ರವಾಗಿದೆ. ಮತ್ತು ಇದು ಕಾದಂಬರಿಯ ಉದ್ದೇಶಕ್ಕೆ ಅಗತ್ಯವಾಗಿ, ಪೂರಕವಾಗಿ ದುಡಿಯುತ್ತದೆ. ಹಿಂದೂ ಸಂಸ್ಕೃತಿಯ ಬಗ್ಗೆ ವಣರ್ಿಸಲು, ಅವನ್ನು ವೈಭವೀಕರಿಸಲು ಕಾದಂಬರಿ ಅಂತಹ ಘಟನೆಗಳನ್ನು ಸೃಷ್ಟಿಸಿಕೊಳ್ಳುತ್ತಾ ಮುಂದುವರಿಯುತ್ತದೆ. ಅತಾಕರ್ಿಕವಾದ, ಬಾಲಿಶವಾದ ಸತ್ಯನ (ಕಾದಂಬರಿಕಾರನ ತರ್ಕ ಕೂಡ) ಆಲೋಚನೆ ಮತ್ತು ಸಮಾಜವನ್ನು ಗ್ರಹಿಸುವ ರೀತಿಯನ್ನು ಇಲ್ಲಿ ಗಮನಿಸಬಹುದಾಗಿದೆ. ಸೂಕ್ಷ್ಮ ಮನಸ್ಸಿನಾತ ಇರಲು ಸಾಧ್ಯವಿಲ್ಲದ ಧರ್ಮ ಕ್ರಿಶ್ಚಿಯನ್ ಧರ್ಮ ಎನ್ನುತ್ತಾ ಅಲ್ಲಿಂದ ಹೊರಬರಲು ಉದ್ದೀಪಿಸುವುದು ಇಲ್ಲಿಯ ಒಳ ಉದ್ದೇಶವಾಗಿದೆ.
ವೈಚಾರಿಕತೆಯ ಪುನರುತ್ಥಾನ
ಸತ್ಯನ ಮಾನಸಿಕ ತುಮುಲದ "ಅಂತ್ಯ'ವೇ ಕಾದಂಬರಿಯ ಮುಕ್ತಾಯ ಕೂಡ. ಸತ್ಯನ ಕಾಯಿಲೆ ಗುಣವಾಗುವುದೆಂದರೆ ಆತ ಮತ್ತೆ ಮರಳಿ 'ಮಾತೃಧರ್ಮ'ಕ್ಕೆ ಮರಳುವುದೇ ಆಗಿದೆ ಎಂದು ಲಿಲ್ಲಿ ಅರಿಯುತ್ತಾಳೆ. ಆದ್ದರಿಂದ ಶಂಕರನನ್ನು ಪತ್ರ ಹಾಕಿ ಕರೆಸುತ್ತಾಳೆ. ಅಲ್ಲಿ ಆಕೆಯ ಸ್ಪಷ್ಟ ಅಭಿಪ್ರಾಯವಿದೆ. ನಾವು ಮದುವೆಯಾಗುವಾಗಲೇ ನಾನು ಹಿಂದೂ ಧರ್ಮಕ್ಕೆ ಸೇರುವ ಅವಕಾಶವಿದ್ದರೆ ಅವರು ಮತಾಂತರ ಹೊಂದುವ ಅವಶ್ಯಕತೆಯಿರಲಿಲ್ಲ. ಆದರೆ ಹಿಂದೂ ಸಮಾಜವು ಆಗಂತುಕರಿಗೆ ಪ್ರವೇಶ ನೀಡದ ಸ್ವಾರ್ಥ ಮಂದಿರದಂತೆ ಆಗಿದೆ. ನಮ್ಮಿಬ್ಬರ ಮದುವೆಯಾಗಲು ಅವರು ಅದರಿಂದ ಹೊರಬರುವುದು ಅನಿವಾರ್ಯವಾಗಿತ್ತು. ಯಾವ ಸಖ್ಯದ ಭವ್ಯ ಕಲ್ಪನೆಯಿಂದ ನಾವು ಮದುವೆಯಾದೆವೊ............... ನಾನು ಮಾನಸಿಕವಾಗಿ ಅನುಭವಿಸುತ್ತಿದ್ದ ನೋವನ್ನೂ ಮತ್ತು ಅದರ ಪರಿಣಾಮವಾಗಿ ನನ್ನ ದೇಹವು ನಶಿಸಿ ಹೋಗುತ್ತಿರುವುದನ್ನು ದೀರ್ಘವಾಗಿ ವಿವರಿಸಿದ್ದಳು.(ಅದೇ; ಪು.269) ಇಲ್ಲಿ ಹಿಂದೂ ಧರ್ಮದ ದೌರ್ಬಲ್ಯವೆಂದರೆ ಬೇರೆ ಧರ್ಮದವರು ಮತ್ತು ಒಮ್ಮೆ ಮತಾಂತರ ಆದವರು ಪುನಃ ಬರಲು ಅವಕಾಶ ಇಲ್ಲದಿರುವುದು ಎನ್ನುವ ಮೂಲಕ ಅಂತಹ ಅವಕಾಶಕ್ಕಾಗಿ ಒತ್ತಾಯಿಸುವುದೇ ಆಗಿದೆ.
ಪವಿತ್ರವಾದ ದಾಂಪತ್ಯವನ್ನು ಬೇರ್ಪಡಿಸಿ ಮತದ ಅನುಯಾಯಿಗಳನ್ನು ಹೆಚ್ಚಿಸುವ ಪಾಪಿ ಯೋಚನೆಯನ್ನು ಯಾವ ಹಿಂದುವೂ ಮಾಡಲಾರ. ಹಾಗೆ ಮಾಡುವವರು ಮಿಷನರಿಗಳು ಮಾತ್ರ (ಅದೇ; ಪು.271) ಎನ್ನುವ ಶಂಕರ ಲಿಲ್ಲಿ ಒಪ್ಪಿರುವಾಗ ಮತ್ತೆ ನೀನು 'ಹಿಂದೂ ಧರ್ಮ'ಕ್ಕೆ ಮರಳಬಹುದು ಎಂದು ಸಲಹೆ ಕೊಡುತ್ತಾನೆ. ಆರ್ಯ ಸಮಾಜದ ಶುದ್ಧೀಕರಣದ ಬಗ್ಗೆ ಪರಿಚಯಿಸುತ್ತಾನೆ. ಹಿಂದೂವಾಗ ಬಯಸುವವರನ್ನು ಅವರು ಶುದ್ಧಿಮಾಡಿ ಧರ್ಮಕ್ಕೆ ಸೇರಿಸಿಕೊಟ್ಟರೆ ಅವರಿಗೆ ಸಾಮಾಜಿಕ ಮತ್ತು ಧಾಮರ್ಿಕ ವಿಷಯಗಳಲ್ಲಿ ಸಮಾನತೆ ಕೊಟ್ತಾರೆ. ಅವರೊಡನೆ ವಿವಾಹ ಸಂಬಂಧ ಬೆಳೆಸ್ತಾರೆ. ಆರ್ಯ ಸಮಾಜದ ಮೂಲಕ ನೀವಿಬ್ಬರೂ ಶುದ್ಧಿ ಹೊಂದಿ (ಅದೇ; ಪು.270) ಎನ್ನುತ್ತಾನೆ.
ಹೀಗೆ ತಮ್ಮ ಮತವನ್ನು ತ್ಯಜಿಸಿ ಕ್ರಿಶ್ಚಿಯನ್, ಮುಸ್ಲಿಂ ಆದವರು ತಿರುಗಿ ಹಿಂದೂ ಧರ್ಮಕ್ಕೆ ಮರಳಿ ಬರುತ್ತಿದ್ದಾರೆ ಎಂಬ ಅಂಶವನ್ನು ಶಂಕರ ಎತ್ತಿ ಆಡುತ್ತಾನೆ. ಆದರೆ ಅವರು ಮರಳಿ ಯಾವ ಜಾತಿ ಮತ್ತು ಸ್ಥಾನಕ್ಕೆ ಮರಳಬೇಕಾಗುತ್ತದೆ ಎನ್ನುವ ಬಗ್ಗೆ ಯಾವ ವಿವರಣೆಯನ್ನೂ ಕೊಡುವುದಿಲ್ಲ.
ಆರ್ಯ ಸಮಾಜವಾದರೂ ಎಂಥದ್ದು ? ಅದು ಯಾವ ವಿಚಾರವನ್ನು ಪ್ರತಿನಿಧಿಸುತ್ತಿದೆ ? ಎನ್ನುವುದಕ್ಕೆ ಮರುದಿನ ನಡೆದ ಸಮಾಜದ ಸಭೆಯೇ ಸಾಕ್ಷಿಯಾಗಿದೆ. ಅಲ್ಲೊಬ್ಬ ಭಾಷಣ ಮಾಡುತ್ತಿದ್ದನು. ಅಸ್ಪೃಶ್ಯರನ್ನು ನಾವು ಸಮಾನಾಗಿ ನಡೆಸಿಕೊಳ್ಳದ್ದರಿಂದಲೇ ಕ್ರಿಶ್ಚಿಯನ್ರು ಬೆಳೆದರು ಎನ್ನುತ್ತಾನೆ. ಈಗಲೂ ಹಿಂದೂ ಸಮಾಜ ಎಚ್ಚೆತ್ತುಕೊಳ್ಳದಿದ್ದರೆ ಭವಿತವ್ಯದಲ್ಲಿ ಹಿಂದೂ ಎಂಬುದು ಕೇವಲ ಐತಿಹಾಸಿಕ ಅಂಶವಾಗಿ ಉಳಿದೀತೇ ವಿನಾ ಜೀವಂತವಾಗಿ ಬದುಕುವ ಜನಾಂಗವಾಗಿ ಮುನ್ನಡೆಯುವುದಿಲ್ಲ. ಮುಂದೆ ಮತ್ತೊಮ್ಮೆ ಬ್ರಿಟಿಷರ ಕೈಗೆ ಸಿಕ್ಕಿದರೆ ಹಿಂದೂಸ್ಥಾನದಲ್ಲಿ ಪಾಕಿಸ್ಥಾನದ ನಿರ್ಮಾಣವಾದಂತೆ ಒಂದು ಪ್ರತ್ಯೇಕ ಏಸುಸ್ಥಾನ ಬೇಕೆಂಬ ಚಳುವಳಿ ಎಬ್ಬಿಸಿಯಾರು'' (ಅದೇ; ಪು.273) ಎನ್ನುವ ಇನ್ನೊಂದು ಪ್ರತ್ಯೇಕತೆಯ, ತೀರಾ ಅಸಂಬದ್ಧ, ಅಚಾರಿತ್ರಿಕವಾದ ವಾದವನ್ನೇ ಮಂಡಿಸುತ್ತಾರೆ. ""ಪಾಶ್ಚಿಮಾತ್ಯ ವಿದ್ಯಾಭ್ಯಾಸ ಮತ್ತು ಬ್ರಿಟಿಷ್ ಆಡಳಿತ ಯಂತ್ರದ ಸುಧಾರಣೆಗಳ ಮೊದಲ ಫಲವನ್ನು ಅನುಭವಿಸಿದ್ದು ಭಾರತದ ಬ್ರಾಹ್ಮಣ ಸಮುದಾಯ ಎನ್ನುವುದು ಗಮಸಿಸಬೇಕಾದ ಸಂಗತಿ. ಭಾರತದ ಬಹುತೇಕ ಕೆಳವರ್ಗ, ಮಿಶನರಿಗಳ ಧಾಮರ್ಿಕ ಮತಾಂತರಗಳಿಗೆ ಒಳಗಾದರೂ ಪಾಶ್ಚಿಮಾತ್ಯ ವೈಚಾರಿಕ ಆಕೃತಿಯನ್ನು ಸ್ವೀಕರಿಸಿದ ವರ್ಗ ಈ ಬ್ರಾಹ್ಮಣ ಸಮುದಾಯವಾಗಿದೆ (2001; ಪು.38) ಎನ್ನುವ ಶಿವರಾಮ ಪಡಿಕ್ಕಲ್ರ ಮಾತು ಇದರ ಇನ್ನೊಂದು ಮುಖವನ್ನು ತೆರೆದಿಡುತ್ತದೆ. ಹಿಂದೂ ಧರ್ಮದಲ್ಲಿ ಇರಬಹುದಾದ ದೋಷ ಕೇವಲ ಅಸ್ಪೃಶ್ಯತೆ ಮಾತ್ರವೇ ಆಗಿದ್ದರೆ ಬ್ಯಾಹ್ಮಣ ವರ್ಗದವರು ಆ ಕಡೆಗೆ ಹೋಗಬೇಕಾಗಿರಲಿಲ್ಲ ಎನ್ನುವುದು ಸ್ಪಷ್ಟ. ಕಾದಂಬರಿ ಇದನ್ನು ಮರೆ ಮಾಚುತ್ತದೆ.
ಒಮ್ಮೆ ಇಂತಹ ಪ್ರಶ್ನೆ ಬಂದುಬಿಡಬಹುದೆನ್ನುವ ಕಾರಣಕ್ಕಾಗಿಯೇ ಶಂಕರ ಪ್ರತಿಯೊಬ್ಬರ ಮನಸ್ಸನ್ನೂ ಸರ್ವ ವಿಧದಲ್ಲಿಯೂ ತೃಪ್ತಿಪಡಿಸುವ ಯಾವ ಸಂಸ್ಥೆಯೂ ಅಥವಾ ಯಾವ ಧರ್ಮವೂ ಜಗತ್ತಿನಲ್ಲಿಲ್ಲ. (ಧರ್ಮಶ್ರೀ; ಪು.72) ಎಂದು ಸಮಾಜಾಯಿಶಿ ಕೊಡುತ್ತಾನೆ.
ಹಿಂದೂಯೇತರ ಧರ್ಮವನ್ನು ಕಾದಂಬರಿಯ ತುಂಬಾ ಪ್ರಾಯೋಗಿಕವಾಗಿ, ತಾತ್ಪಿಕವಾಗಿ, ಕಟುವಾಗಿ ತಿರಸ್ಕರಿಸುವ ಶಂಕರ ನಾನು ಮನಸ್ಸನ್ನು ಸದಾ ತೆರೆದಿರುತ್ತೇನೆ. ಎಲ್ಲಾ ರೀತಿಯ ವಿಚಾರಗಳಿಗೂ ಅಲ್ಲಿ ಮುಕ್ತವಾಗಿ ಪ್ರವೇಶ ಕೊಡ್ತೀನಿ. ಯಾವ ಒಂದು ಸಂಪ್ರದಾಯದ ಅಭಿಪ್ರಾಯಕ್ಕೆ ನೇತುಬೀಳಲ್ಲ (ಅದೇ; ಪು.272) ಎನ್ನುವ ಮೂಲಕ ಹಿಂದೂ ಧರ್ಮ ಎಲ್ಲಾ ವಿಚಾರನ್ನೂ ಕೇಳುವ, ಸ್ವೀಕರಿಸುವ ಸಂಯಮ ಹೊಂದಿದೆ ಎಂದು ಪ್ರತಿಪಾದಿಸಲು ಹೊರಡುತ್ತಾನೆ. ಆದರೆ ಈ ವಾಕ್ಯ ಅವನ ಈವರೆಗೆ ಬೆಳೆಸಿಕೊಂಡು ಬಂದ ವ್ಯಕ್ತಿತ್ವದಿಂದ ಪ್ರತ್ಯೇಕವಾಗಿಯೇ ನಿಂತು ಬಿಡುವುದನ್ನು ಗಮನಿಸಬಹುದು. ಇದರ ಉದ್ದೇಶವನ್ನು ಸಿ. ಎನ್. ರಾಮಚಂದ್ರನ್ ವಿವರಿಸುವುದು ಹೀಗೆ ನನಗೆ ತೋರಿದಂತೆ ಭೈರಪ್ಪನವರ ಕಾದಂಬರಿಗಳ ವೈಶಿಷ್ಟ್ಯವೆಂದರೆ ಅವರ ಕೃತಿಗಳ ವೈಚಾರಿಕ ಹೊರ ರಚನೆ ಅತಿ ದುರ್ಬಲವಾಗಿರುತ್ತದೆ. (ಆ ಹೇಳಿಕೆ ಕೃತಿಯ "ರಚನೆ'ಯನ್ನು ಕುರಿತದ್ದೇ ಹೊರತು ವೈಚಾರಿಕತೆಯನ್ನಲ್ಲ) ಅಷ್ಟೇ ಅಲ್ಲ ಅವರ ಭಾವನಾತ್ಮಕ ಒಳರಚನೆ ಅತ್ಯಂತ ಪ್ರಭಾವಶಾಲಿಯಾಗಿರುತ್ತದೆ. ಈ ಕಾರಣದಿಂದಲೇ ಅವರ ಕೃತಿಗಳ ವೈಚಾರಿಕತೆ ಎಷ್ಟೇ ತರ್ಕ ಶುದ್ಧವಾಗಿದ್ದರೂ "ಕ್ರಾಂತಿಕಾರಕ'ವಾಗಿದ್ದರೂ ಕೃತಿಗಳ ಒಟ್ಟಾರೆಯಾದ ಪರಿಣಾಮ ಆ ವೈಚಾರಿಕತೆಯ ವಿರುದ್ಧ ದಿಕ್ಕಿನಲ್ಲಿರುತ್ತದೆ (ಸಂಕ್ರಮಣ; ಪು.11-12) ಇಲ್ಲಿಯ ಹೊರ ಮತ್ತು ಒಳರಚನೆಯ ತಾಕಲಾಟ ಗಮನಿಸಬಹುದು ಹಿಂದೂ ಸಮಾಜದಲ್ಲಿ ಆಗಬೇಕಾದ ಸುಧಾರಣೆಯನ್ನು ಎತ್ತಿ ಹೇಳುವುದು (ಭೈರಪ್ಪ ಎಸ್. ಎಲ್.; ಉದ್ಧರಣೆ; ಕರ್ಮವೀರ; ಫೆಬ್ರವರಿ, 2007) ಇಲ್ಲಿಯ ಹೊರತರ್ಕವಾದರೆ ಹಿಂದೂತ್ವ (ವೈದಿಕ) ಸಿದ್ಧಾಂತವನ್ನು ಪುನಃ ಸ್ಥಾಪಿಸುವುದರ, ಪುನರುತ್ಥಾನಗೊಳಿಸುವುದರ ಕಡೆ ಒಳತರ್ಕ ತುಡಿಯುತ್ತದೆ.
ನೀವು ಸುಮ್ಮನಿರಿ, ನನ್ನ ಸೌಭಾಗ್ಯ ಯಾವುದು ಅಂತ ನನಗೆ ಗೊತ್ತಿದೆ (ಧರ್ಮಶ್ರೀ:ಪು.274) ಎಂದು ಹಿಂದೂ ಧರ್ಮಕ್ಕೆ ಮರಳುವ ಕುರಿತು ಲಿಲ್ಲಿ ಹೇಳುತ್ತಾಳೆ. ಮರು ಮತಾಂತರ ಕೂಡ ನಡೆಯುವುದು ವೈದಿಕ ಪದ್ಧತಿಯಂತೆ. ಇಬ್ಬರಿಗೂ ಗಾಯತ್ರಿ ಮಂತ್ರ ಹೇಳಿಕೊಡಲಾಗುತ್ತದೆ. ವೇದ ಮಂತ್ರಗಳ ಘೋಷ ನಡೆಯುತ್ತದೆ. ಅಗ್ನಿಗೆ ಪೂಣರ್ಾಹುತಿ ಕೊಟ್ಟು 'ಸಂಸ್ಕಾರ' ಕ್ರಿಯೆಯನ್ನು ನೆರವೇರಿಸುತ್ತಾರೆ. ಕೊನೆಯಲ್ಲಿ ಸತ್ಯದಾಸ ಮತ್ತೆ ಸತ್ಯನಾರಾಯಣನಾದ. ಲಿಲ್ಲಿಗೆ 'ಧರ್ಮಶ್ರೀ' ಎಂದು ಹೆಸರಿಟ್ಟ.
ಹೀಗೆ ಭೈರಪ್ಪನವರು ಸತ್ಯನಾರಾಯಣನ ಮನಸ್ಥಿತಿಯನ್ನು ವಿಶ್ಲೇಷಿಸುತ್ತಾ ಪ್ರೀತಿಗಾಗಿ ಧರ್ಮವನ್ನು ತ್ಯಜಿಸುವ ಉದಾರ ಗುಣದ ಸತ್ಯ, ತನ್ನ ಗಂಡನಿಗಾಗಿ ತನ್ನ ಧರ್ಮವನ್ನೇ ತ್ಯಜಿಸಿ ಬರುವ ಲಿಲ್ಲಿ, ರಾಷ್ಟ್ರಸೇವೆಗಾಗಿ (ಆರ್.ಎಸ್.ಎಸ್.ನೀತಿಗಾಗಿ) ಬದುಕನ್ನೇ ಮುಡಿವಾಗಿಟ್ಟ ಶಂಕರ, ಧರ್ಮ ನೀತಿಗಾಗಿ ಅಣ್ಣನನ್ನೇ ಹೊರಗೆ ಕೂಡ್ರಿಸಿ ಊಟ ಹಾಕುವ ಆ ಶಂಕುಂತಲೆ ಹೀಗೆ ಹಲವು ಆದರ್ಶ ಪಾತ್ರಗಳನ್ನು ಸೃಷ್ಟಿಸಿ ಸುಧಾರಣಾವಾದಿಯಂತೆ ಕಾಣುತ್ತಾರೆ. ಆದರೆ ಹಿಟ್ಟಿನ ಹುಂಜದಲ್ಲಿರುವ ಬೆಂತರ ಬೇರೆ. ಕ್ರಿಶ್ಚಿಯನ್ ಧರ್ಮ ಆಮಿಷಗಳ ಮೂಲಕ ಬಂತೆಂದೂ, ಮುಸ್ಲಿಂ ಧರ್ಮವು ಆಕ್ರಮಣದ ಮೂಲಕ ಬಂತೆಂದೂ ಇದು ಭಾರತೀಯ ಸಂಸ್ಕತಿಗೆ ಹೊರತಾದದ್ದು ಎನ್ನುವ ವಾದವನ್ನು ಪೂರ್ವಗ್ರಹ ಪೀಡಿತರಾಗಿ ತಕರ್ಿಸುತ್ತಾರೆ. ಧರ್ಮ ಅನ್ನೋದು ಕೆಲವು ಜನರ ಹುಚ್ಚು. ಅದೊಂದು ಬಗೆಯ ಭಂಗಿ ಇದ್ದ ಹಾಗೆ. ಕಾಲೇಜಿನಲ್ಲಿ ಪಾಠ ಹೇಳುವಾಗ ನಾನು ಹೇಳತಿರ್ತೀನಿ. ನನಗೆ ಮಾಕ್ರ್ಸವಾದದಲ್ಲಿ ನಂಬಿಕೆ ಇದೆ. ಬಡವರನ್ನು ವಂಚಿಸಲು ಹಣವಂತರ ಕೈಗೊಂಬೆಗಳು ತಯಾರಿಸಿರುವ ಮಾದಕ ಆಫೀಮು ಎಂಬುದೇ ಧರ್ಮ. ಬರಿಯ ಸಾಮಾಜಿಕ ಕಾರಣಗಳಿಂದ ನೀವು ಕ್ರೈಸ್ತಮತಕ್ಕೆ ಸೇರುವುದು ಸದ್ಯದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಬಹುದು. ಆದರೆ ನಾನು ಹೇಳ್ತೀನಿ; ಮುಂದೆ ಎಂದೂ ಚಚರ್ಿನಲ್ಲಾಗಲಿ, ಧರ್ಮದಲ್ಲಾಗಲಿ ನಂಬಿಕೆ ಇಡಬೇಡಿ. ಅದರಿಂದ ದೂರ ಇದ್ದು ಜೀವಿಸಿ. ಈ ಚರ್ಚ, ಈ ದೇವಸ್ಥಾನಗಳಲ್ಲಿ ತುಂಬಿರುವುದು ಬರೀ ಹೊಲಸು.'' (ಅದೇ;ಪು.184) ಎನ್ನುವ ದೇವಪ್ರಸಾದರ ಎಡಪಂಥೀಯ ಆಲೋಚನೆಯನ್ನು (ಒಳ್ಳೆಯ ಉದ್ದೇಶಕ್ಕಾಗಿ, ಪೂರ್ಣ ಅರ್ಥದಲ್ಲಿ ಬಳಕೆ ಆಗಿಲ್ಲ ಎನ್ನುವುದು ಬೇರೆ ಮಾತು) ಮದುವೆಯ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಮಾಡುವ ಮೂಲಕ (ಹೆಣ್ಣಿನ ಮೋಹಕ್ಕೆ ಒಳಗಾದ ಸಂದರ್ಭದಲ್ಲಿ) ವ್ಯಂಗ್ಯ ಮಾಡುತ್ತಾರೆ. ಹಾಗಾದರೆ ಅವರು ಪ್ರತಿಪಾದಿಸುವ ತಾತ್ವಿಕತೆ ಹಿಂದೂ ಧರ್ಮದ ಅದರಲ್ಲೂ ಸನಾತನ ತತ್ವದೊಂದಿಗೆ -ಪೂರ್ಣ ಪ್ರಮಾಣದ ಪುನರುತ್ಥಾನವೇ ಆಗಿದೆ.

-ಡಾ. ವಿಠ್ಠಲ ಭಂಡಾರಿ,ಕೆರೆಕೋಣ

******

No comments:

Post a Comment