Friday, 7 June 2024
ಸಂವಿಧಾನ ಓದು- ಪ್ರಶ್ನೋತ್ತರ
ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ ಅವರ ಸಂವಿಧಾನದ ಓದು ಪುಸ್ತಕದ ಮೊದಲ ಮುದ್ರಣ ಬಿಡುಗಡೆ ಮತ್ತು 'ಸಂವಿಧಾನ ಓದು' ಅಭಿಯಾನದ ಉದ್ಘಾಟನೆ ಒಟ್ಟಿಗೆ ನಡೆದದ್ದು 2018ರ ಅಗಸ್ಟ 25, ಬೆಂಗಳೂರಿನಲ್ಲಿ. ಅದಕ್ಕಿಂತ ಕೆಲವು ದಿನ/ತಿಂಗಳ ಮೊದಲು ಅಥವಾ ಅದೇ ಸಂದರ್ಭದಲ್ಲಿ ಕೆಲವು ದುಷ್ಕರ್ಮಿಗಳು ಸಂವಿಧಾನವನ್ನು ಸುಟ್ಟು ಹಾಕುವ ಕಾರ್ಯಕ್ರಮ ನಡೆಸಿದರು. ಹಲವರ ಒತ್ತಾಯದ ನಂತರ ಅವರ ಮೇಲೆ ಒಂದು ಕೇಸ್ ಹಾಕಲಾಯಿತು. ಶಿರಸಿಯಲ್ಲಿ ಕೆಲವು ಧರ್ಮಾಂಧರು 'ಸಂವಿಧಾನ ನಡೆ' ಕಾರ್ಯಕ್ರಮದ ಮೆರವಣಿಗೆ ನಡೆಸಿದ ರಸ್ತೆ ಮತ್ತು ಸಾರ್ವಜನಿಕ ಸಭೆ ನಡೆದ ಸಭಾಭವನಕ್ಕೆ ಸಗಣಿ ನೀರು, ಗೋಮೂತ್ರ ಹಾಕಿ ಶುದ್ದೀಕರಿಸಿರುವುದಾಗಿ(!?) ಹೇಳಿದರು. 'ನಾವು ಅಧಿಕಾರಕ್ಕೆ ಬಂದಿದ್ದೆ ಸಂವಿಧಾನ ಬದಲಿಸಲಿಕ್ಕೆ' ಎಂದು ಜನಪ್ರತಿನಿಧಿಯೊಬ್ಬರು ಕೂಗಾಡಿದರು...... ಇವೆಲ್ಲವೂ ಒಂದೆಡೆ ಚರ್ಚೆಯಾಗುತ್ತಿರುವಾಗಲೇ 'ಸಂವಿಧಾನ ಓದು' ಅಭಿಯಾನವನ್ನು 'ಸಹಯಾನ (ಡಾ. ಆರ್.ವಿ.ಭಂಡಾರಿ ನೆನಪಿನ ಸಂಸ್ಕೃತಿ ಅಧ್ಯಯನ ಕೇಂದ್ರ, ಕೆರೆಕೋಣ) ಮತ್ತು 'ಸಮುದಾಯ ಕರ್ನಾಟಕ' ಜಂಟಿಯಾಗಿ ಕರ್ನಾಟಕದಾದ್ಯಂತ ಪ್ರಾರಂಭಿಸಿದವು. ಪ್ರಜ್ಞಾವಂತ ಜನರು, ಸಂಘಟನೆಗಳು, ಶಿಕ್ಷಣ ಸಂಸ್ಥೆಗಳು ಸ್ವಯಂ ಪ್ರೇರಿತರಾಗಿ ಈ ಅಭಿಯಾನದ ಸಹಯಾನಿಗಳಾದರು. ಕರ್ನಾಟಕದ ತುಂಬಾ ಎಲ್ಲಾ ಜಿಲ್ಲೆಗಳಲ್ಲಿ ಈ ಅಭಿಯಾನದ ಕಾರ್ಯಾಗಾರ ನಡೆದವು. ಕೆಲವು ಜಿಲ್ಲೆಗಳಲ್ಲಂತೂ ಹಲವು ಬಾರಿ ನಡೆದವು. ಹಲವು ವಿಶ್ವವಿದ್ಯಾಲಯಗಳಲ್ಲಿ ಎನ್.ಎಸ್.ಎಸ್ ಅಡಿ “ಸಂವಿಧಾನ ಓದು' ಕಾರ್ಯಗಾರ ಹಮ್ಮಿಕೊಳ್ಳಲಾಯಿತು. ಕರ್ನಾಟಕದ ಕಾನೂನು ಸೇವೆಗಳ ಪ್ರಾಧಿಕಾರ ಎಲ್ಲಾ ಜಿಲ್ಲೆಗಳಲ್ಲಿ, ಎಲ್ಲಾ ತಾಲೂಕುಗಳಲ್ಲಿ ಈ ಕಾರ್ಯಕ್ರಮ ನಡೆಸುವ ಮಹತ್ವದ ತೀರ್ಮಾನ ಕೈಗೊಂಡಿತು. ಬಹುಶಃ ತಾವೂ ಈ ಅಭಿಯಾನದಲ್ಲಿ ಒಮ್ಮೆಯಾದರೂ ಪಾಲ್ಗೊಂಡಿದ್ದೀರಿ ಮತ್ತು ಅದರ ಯಶಸ್ಸಿನಲ್ಲಿ ಪಾಲುದಾರರಾಗಿದ್ದೀರಿ ಎಂದುಕೊಂಡಿದ್ದೇವೆ.
ಕರ್ನಾಟಕದ ಹೈಕೋರ್ಟಿನ ನ್ಯಾಯಾಧೀಶರಾಗಿ ನಿವೃತ್ತರಾದ ನಂತರ ಈ ಅಭಿಯಾನದ ನೇತೃತ್ವವಹಿಸಿದ್ದರಿಂದ ಅಭಿಯಾನಕ್ಕೆ ಆನೆಬಲ ಬಂದಂತಾಯಿತು. ಈವರೆಗೆ ಸರಿ ಸುಮಾರು400-450 ಕಾರ್ಯಕ್ರಮಗಳು ಕರ್ನಾಟಕದಲ್ಲಿ ನಡೆದವು. ಕನ್ನಡದ ಪ್ರಕಾಶನದ ಇತಿಹಾಸದಲ್ಲಿಯೇ ದಾಖಲೆ ಅನ್ನುವಷ್ಟರ ಮಟ್ಟಿಗೆ ಈ ಪುಸ್ತಕ 50 ಮುದ್ರಣ ಕಂಡಿದೆ.
ಸಂವಿಧಾನ ಓದು- ಪ್ರಶ್ನೋತ್ತರ - 6 /ಧ್ವನಿ – ಮಲ್ಲಿಕಾರ್ಜುನ ಮಾನ್ಪಡೆ/ ಬರಹ- ನ್ಯಾ, ನಾಗಮೋಹನದಾಸ್ ಎಚ್ . ಎನ್,/ ಜನಪ್ರತಿನಿಧಿಗಳಿಗೇಕೆ ಶೈಕ್ಷಣಿಕ ಮಾನದಂಡ ವಿಧಿಸಿಲ್ಲ? 'ಸಂವಿಧಾನ ಓದು' ಪುಸ್ತಕವು(ಬೆಲೆ: 50 ರೂ) ನಮ್ಮ ನಾಡಿನ ಎಲ್ಲಾ ವರ್ಗದ, ಸಮುದಾಯದ, ವಿದ್ಯಾರ್ಥಿ, ಯುವಜನರ, ಮಹಿಳೆಯರ ಅರಿವನ್ನು ವಿಸ್ತರಿಸಿತು. ಸಂವಿಧಾನದ ಕುರಿತು ಉದ್ದೇಶಪೂರ್ವಕವಾಗಿ ಹುಟ್ಟಿಸಿದ ಹಲವು ಪೂರ್ವಾಗ್ರಹಕ್ಕೆ ಸೂಕ್ತ ಉತ್ತರವಾಯಿತು. ಕಾರ್ಯಾಗಾರದಲ್ಲಿ ಭಾಗವಹಿಸಿದ ನಂತರ ಇನ್ನೂ ಹಲವು ಪ್ರಶ್ನೆಗಳು ಹುಟ್ಟಿಕೊಂಡವು. ಸಂವಿಧಾನವನ್ನು ತಾವೂ ತಿಳಿದುಕೊಳ್ಳಬಹುದು ಮಾತ್ರವಲ್ಲ. ಅದಕ್ಕನುಗುಣವಾಗಿ ಬದುಕಬೇಕಾದ ಅವಶ್ಯಕತೆಇದೆ ಎನ್ನುವ ಭಾವನೆಯನ್ನು ಬೆಳೆಸಲು ಈ ಪುಸ್ತಕಕ್ಕೆ ಸಾಧ್ಯವಾಯಿತು. 30 ಜಿಲ್ಲೆಗಳಲ್ಲಿಯೂ ನಡೆದ ಕಾರ್ಯಕ್ರಮಗಳಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಸಂವಾದವೇ ನಡೆಯಿತು. ತಾವು ವಾಸ್ತವದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ, ಅನುಮಾನಗಳಿಗೆ ಸಂವಿಧಾನ ರಿತ್ಯಾ ಉತ್ತರ ಬಯಸುತ್ತಿದ್ದರು. ಹತ್ತು ಹಲವು ಪ್ರಶ್ನೆ ಕೇಳಿ ಅಲ್ಲಿ ಉತ್ತರ ಪಡೆದರು. ಒಂದರ್ಥದಲ್ಲಿ ಸಂವಿಧಾನವನ್ನು ಅನುಸಂಧಾನಿಸುವ ಕೆಲಸ ತಳಮಟ್ಟದಿಂದ ಪ್ರಾರಂಭ ಆಯಿತು. ಕಾರ್ಯಕ್ರಮ ಮುಗಿಸಿ ಬಂದಾಗಲೂ ವಾಟ್ಸಪ್ ಮೂಲಕ, ದೂರವಾಣಿಯ ಮೂಲಕ ಒಂದಿಷ್ಟು ಪ್ರಶ್ನೆಗಳು ಬರುತ್ತಿದ್ದವು. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸದೇ ಅಭಿಯಾನ ಪೂರ್ಣಗೊಳ್ಳದು ಎನ್ನುವ ಕಾರಣದಿಂದಅಭಿಯಾನದಲ್ಲಿ ಬಂದ ಎಲ್ಲಾ ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ಸೂಕ್ತ ಉತ್ತರವನ್ನು ನೀಡಿದರು. ಅಭಿಯಾನದ ಬಹು ಮಹತ್ತರ ಭಾಗವೆಂದರೆ ಸಂವಾದ ಕಾರ್ಯಕ್ರಮ. ಈ ರೀತಿಯ ಸಂವಿಧಾನ ಓದು ಅಭಿಯಾನದ ಸಂವಾದದ ಬಹು ಚರ್ಚಿತ 25 ಪ್ರಶ್ನೆಗಳಿಗೆ ನ್ಯಾಯಮೂರ್ತಿಗಳು ನೀಡಿದ ಉತ್ತರಗಳನ್ನು ಸಂವಿಧಾನ ಓದು: 25 ಪ್ರಶ್ನೋತ್ತರ’ ಕೃತಿಯಲ್ಲಿ ಪ್ರಕಟಿಸಿದ್ದೇವೆ.(ಬೆಲೆ-30 ರೂ) ಅದರ ಧ್ವನಿ ಮುದ್ರಣವನ್ನು ಈ ಮೂಲಕ ನೀಡುತ್ತಿದ್ದೇವೆ. ಉತ್ತರ ಓದಿದ ಎಲ್ಲರಿಗೆ ಅನಂತ ಕೃತಜ್ಞತೆಗಳು. ಈವರೆಗೆ ನಮ್ಮ ಈ ಅಭಿಯಾನವನ್ನು ಆಯೋಜಿಸಿದ, ಬೆಂಬಲಿಸಿದ ತಮಗೆ ಅನಂತ ಕೃತಜ್ಞತೆಗಳು. ಸಂವಿಧಾನದ ಆಶಯ ನಿಮ್ಮ ನಮ್ಮ ಮನೆಗೂ ಮನಕ್ಕೂ ತಲುಪಲಿ ಎಂಬ ಆಶಯ ನಮ್ಮದು ಪುಸ್ತಕಕ್ಕಾಗಿ ಸಂಪರ್ಕಿಸಿರಿ ಡಾ. ವಿಠ್ಠಲ ಭಂಡಾರಿ ಕಾರ್ಯದರ್ಶಿ, ಸಹಯಾನ vittalbhandari@gmail.com 9448729359
ದಿಟ್ಟಿಸಿ ನೋಡದಿರಿ ಕಾಮ್ರೇಡ್...
ದಿಟ್ಟಿಸಿ ನೋಡದಿರಿ ಕಾಮ್ರೇಡ್...
ತಡಮಾಡಬಾರದಿತ್ತು ನಾನು, ಕಾಡ ಹಾದಿಯ ಬೆಳಕಿನ ಜಾಡು ಹಿಡಿದು ಮುಂದೆ ಸಾಗಿದ ಕಾಮ್ರೇಡ್
ಜಯಕುಮಾರ್ ರ ಪುಸ್ತಕದ ಬಗ್ಗೆ ಬರೆಯಲು ತಡಮಾಡಲೇಬಾರದಿತ್ತು... ಆದರೆ ಅಷ್ಟೇ ಕೆಲಸದ ಒತ್ತಡವಿತ್ತು, ಒಂದು ಕಡೆ ಚುನಾವಣೆ ಸಂಬಂಧಿಸಿ ರಾಜಕೀಯ ಕರ್ತವ್ಯ, ಓಡಾಟ ಮತ್ತೊಂದೆಡೆ ಸಾಹಿತ್ಯದ ಕೆಲವು ಕೆಲಸಗಳು ಸಹಯಾನದಲ್ಲಿ ವಿಠ್ಠಲನ ನೆನಪಿನ ಮೂರನೇ ವರ್ಷದ ಉಪನ್ಯಾಸ ತಯಾರಿ, ಇನ್ನೂ ಅನೇಕ ಕೆಲಸಗಳ ಮಧ್ಯೆ ಪುಸ್ತಕ ಓದಿಯೂ ಅಭಿಪ್ರಾಯ ದಾಖಲಿಸಿ ಕಳಿಸಲು ತುಸು ತಡಮಾಡಿದೆ. ಜಯಕುಮಾರರು ಕಾಯಲಿಲ್ಲ. ನಡೆದೇಬಿಟ್ಟರು. ಹೋಗುವ ಮುನ್ನ ಫೋನಿನಲ್ಲಿ ಆಲಿಸಿದರು, "ಕಾಮ್ರೇಡ್, ನಿಮ್ಮ ಬರಹದ ತುಂಬಾ ಕೆಂಬಾವುಟದ ಕಂಪಿದೆ ಮತ್ತು ನನ್ನ/ಮ್ಮ ಮನ ಕಂಪಿಸಿದೆ; ರೋದಿಸಿದೆ. ನಿಮ್ಮ ಅಮ್ಮನ ಜೊತೆಗೆ ಅಂದು ಯಜಮಾನನ ಮನೆಯಿಂದ ಮಧ್ಯರಾತ್ರಿ ನಾನೂ ನಡೆದೆ, ಅಣ್ಣ ಚಂದ್ರಶೇಖರರಕೈ ಹಿಡಿದು ನಾನೂ ಸಾಗಿದೆ, ನಿಮ್ಮ ಒಳಿತಿನ ಹಾದಿಯಲ್ಲೂ ಕಷ್ಟದ ಅನುಭವದಲ್ಲೂ ನಾನೂ ಜೊತೆಗಿದ್ದಂತೆಯೇ ಓದಿದೆ. ನಮ್ಮನಮ್ಮ ಕಷ್ಟಗಳ ನಾವೇ ದಾಖಲೆ ಮಾಡುವುದೇ ಒಳ್ಳೆಯದು, ನಿಮ್ಮ ಅಭಿಪ್ರಾಯ ಬೇಧ ಇಟ್ಟುಕೊಂಡೇ ಸಂಘಟನಾ ಅನುಭವ ಪೂರ್ತಿ ಬರೆಯಿರಿ ಕಾಮ್ರೇಡ್" ಎಂದೆಲ್ಲ ಹೇಳಿದೆ. ತಮ್ಮ ತೋಟದ ಮನೆಯ ಅಂಗಳ ಈಗ ಎಲ್ಲಾ ಕಾರ್ಯಕ್ರಮ ಗಳಿಗೆ ಉಪಯೋಗವಾಗಬೇಕು, ಸಹಯಾನದ ಹಾಗೆ. ನೀವೂ ಬನ್ನಿ ಬಳಸಿ, ಉಳಿದದ್ದನ್ನು ಲೀಲಾ ಹತ್ತಿರ ಮಾತಾಡಿ ಎಂದು ಫೋನ್ ಇಟ್ಟರು. ಫೇಸ್ ಬುಕ್ ನಲ್ಲಿ ನನ್ನನ್ನುದ್ದೇಶಿಸಿ ಕಮೆಂಟಿಸಿದರು. ಅವರ ಬಾಳಸಂಗಾತಿ ಡಾ. ಲೀಲಾ ಸಂಪಿಗೆ ಕೂಡ ಫೋನಿನಲ್ಲಿ ಒಂದಿಷ್ಟು ನನ್ನ ಅಭಿಪ್ರಾಯ ಕೇಳಿಸಿಕೊಂಡರು, ಬೇಗ ಬರೆದುಕೊಡು ಅಂದಿದ್ದರು. ಅದಾಗಿ ಕಳೆದ ವಾರ ಹಂಸಲೇಖ ಮತ್ತು ಇತರ ಗಣ್ಯರು ಅವರ ತೋಟದ ಮನೆಯಲ್ಲಿ ಕಾರ್ಯಕ್ರಮ ಮಾಡಿದ್ದನ್ನು ನೋಡಿದೆ. ಸ್ವಲ್ಪ ಚೇತರಿಸಿಕೊಂಡಂತೆ ಅನಿಸ್ತು. ಆದರೆ ಇಂದು ಮೇ ೨೫ ಕ್ಕೆ ಅದೆಲ್ಲ ಸುಳ್ಳಾಗಿತ್ತು.
ಅಂದು ಏಪ್ರಿಲ್ ೧೧, ತಡರಾತ್ರಿ ನಾನು "ಕಾಡು ಹಾದಿಯ ಬೆಳಕಿನ ಜಾಡು" ಓದಿ ಮುಗಿಸಿ ಅದೇ ಪುಸ್ತಕದ ಕೊನೆಯ ಖಾಲಿ ಹಾಳೆಯಲ್ಲಿ ಪೆನ್ಸಿಲ್ ನಲ್ಲಿ ಬರೆದಿದ್ದ ಟಿಪ್ಪಣಿ ನಿಮ್ಮ ಓದಿಗೆ ಪೋಸ್ಟ್ ಮಾಡುತ್ತಿರುವೆ. (ಅಂದು ಸೆಲ್ಫಿಯಲ್ಲಿ ತೆಗೆದಿಟ್ಟ ಫೋಟೋ ಕೂಡ.)
ನಾನು ೧೯೯೧-೯೨ ರಿಂದ ಉತ್ತರ ಕನ್ನಡ ದಲ್ಲಿ ಚಳುವಳಿಯತ್ತ ಬಂದು, ೯೩-೯೪ ರಿಂದಲೇ ಪೂರ್ಣ ಪ್ರಮಾಣದಲ್ಲಿ ಎಸ್.ಎಫ್.ಐ ಮತ್ತು ಸಮಾನ ಮನಸಿನ ಸಂಘಟನೆಗಳಲ್ಲಿ ತೊಡಗಿದವಳು. ಆಗ ಪದೇಪದೇ ಕೇಳುತ್ತಿದ್ದ ಹೆಸರು ಆರ್ ಜಯಕುಮಾರ್, ಲೀಲಾ ಸಂಪಿಗೆ, ಆರಾದ್ಯ, ಕಟ್ಟಿ, ಕೊಂಚಾಡಿ, ವಸಂತ, ತೇಜಸ್ವಿನಿ ಹೀಗೆಲ್ಲ. ನಂತರದ ದಿನಗಳಲ್ಲಿ ಜಯಕುಮಾರರ ಬಗ್ಗೆ ವಿಠ್ಠಲನ ಬಾಯಲ್ಲಿ ಹಲವುಬಾರಿ ಕೇಳಿದ್ದೆ. ನಂತರ ನಾನು ಕೆಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೇನೆ. ಅವರು ಒಮ್ಮೆ ನಮ್ಮಲ್ಲಿಗೆ ಬಂದಿದ್ದರು, ನಾನು ಕೆರೆಕೋಣದಲ್ಲಿರುವ ಸಹಯಾನದ ಅಂಗಳದಲ್ಲಿ ಸ್ವಚ್ಛ ಮಾಡುತ್ತ ಗೇಟಿನ ತನಕ ಹೋದಾಗೆಲ್ಲ, ತೋಟದ ಕಟ್ಟೆ ಹತ್ತಿರ ಹೋದಾಗೆಲ್ಲ, ಜಯಕುಮಾರರು ನಮ್ಮನೆಯಿಂದ ಬೀಳ್ಕೊಂಡು ಹೋಗುವಾಗ ಅದೇ ಕಟ್ಟೆಯ ಮೇಲೆ ಯೋಚನಾಮಗ್ನರಾಗಿ ಕುಳಿತ ರೀತಿ ನೆನಪಾಗುತ್ತದೆ. ಆ ಕಟ್ಟೆಗೆ ಎರಡೂ ಕೈ ತಾಗಿಸಿಟ್ಟು ಕತ್ತು ಅಡ್ಡ ತಿರುಗಿಸಿ ನನ್ನನ್ನು ವಿಠ್ಠಲನನ್ನು ಉದ್ದೇಶಿಸಿ ಹೇಳಿದ ಮಾತು ಯಾವಾಗಲೂ ಮರೆಯಲಾರದ್ದು. ಅವರು ಕುಳಿತಿದ್ದ ಜಾಗ, ದಿನವೂ ಜ್ಞಾಪಕಕ್ಕೆ ಬರುತ್ತದೆ. ಜೊತೆಗೆ ಜೋಯಿಡಾಕ್ಕೆ ಬರಬೇಕು, ಕಾರವಾರದಲ್ಲಿ ಕಾಳಿ ಸಂಗಮ ನೋಡಬೇಕು ಎಂದಿದ್ದೆಲ್ಲ ಸುಳ್ಳು ಎನಿಸುತ್ತದೆ. ಕೊನೆಯ ಭೇಟಿ ಅಂದರೆ ಸಮುದಾಯ ಕರ್ನಾಟಕ ರಾಜ್ಯ ಸಮ್ಮೇಳನದಲ್ಲಿ ಲೀಲಾ ಸಂಪಿಗೆಯವರ ಜೊತೆಗೆ.
ಪುಸ್ತಕ ಬಿಡುಗಡೆ ಸಮಾರಂಭ ಜಾಲತಾಣದಲ್ಲಿ ನೋಡಿದೆ. ಕೂಡಲೇ "ಕಾಡು ಹಾದಿಯ ಬೆಳಕಿನ ಜಾಡು" ನ್ನು ಬೆಂಗಳೂರಿನಲ್ಲಿ ಖರೀದಿಸಿದ್ದೇನೆ, ಓದಿದೆ. ನಿಬ್ಬೆರಗಾದೆ. ಅಂದು ಇವರೆಲ್ಲ ರಾಜ್ಯ ನಾಯಕರಾಗಿದ್ದಾಗ ಎಸ್.ಎಫ್.ಐ ಮತ್ತು ಡಿವೈಎಫ್ ಐ ಸಂಘಟನೆಯಲ್ಲಿ ಇದ್ದ ವಿಠ್ಠಲನಿಂದ ಹಾಗೂ ಸಂಘಟನೆಯ ಹಿರಿಯ ಸಂಗಾತಿಗಳಿಂದ ನಿಮ್ಮ ಅಂದಿನ ತಂಡದ ಬಗ್ಗೆ ತುಸು ಕೇಳಿದ್ದೆನಷ್ಟೆ. ಈಗ ನಿಮ್ಮ ಜೀವನಾನುಭವ ಓದುತ್ತಲೇ ಜೊತೆಗೇ ಸಾಗಿದೆ. ಕುಞಮ್ಮರ ಜೊತೆಗೆ ನಡೆದೆ, ಅಣ್ಣನ ಕಾದೆ, ಕುಮಾರ ಜಯದ ಹಾದಿ ಅಂದರೆ ಕ್ರಾಂತಿ ಹಾದಿಯಲ್ಲಿ ಇದ್ದಾಗ ನಾನೂ ನಡೆಯುತ್ತ ಘೋಷಣೆ ಹಾಕುತ್ತಲೇ ಇದ್ದೆ. ಸೋಲಿನಲ್ಲಿ ಜಯದ ಮೆಟ್ಟಿಲು ದಾಖಲಿಸುತ್ತಿದ್ದಾಗ ಅಮ್ಮ ಕುಞಮ್ಮ ಅಗಲಿದಾಗ ನಾನೂ ಅತ್ತೆ. ನಿಮಗೆ ಕ್ರಾಂತಿಕಾರಿ ಶುಭಾಶಯ ಎಂದು ಅಂದೇ ಬರೆದಿಟ್ಟಿದ್ದೆ.
ಹೌದು, ಅನುಭವಿಸಿ ಬರೆದ ಆಳದ ಸಂಕಥನವದು. ತಂದೆ ಯಾರೆಂದು ಹೇಳಲಾಗದಿದ್ದರೂ ತಾಯಿಯಂತೂ ಕಣ್ಣೆದುರಿನ ಸತ್ಯವಾಗಿದ್ದು ಮುನ್ನಡೆಸಿದರು. ಅಣ್ಣ ಎಂದರೆ ಅನ್ನದ ಕಣವೇ ಆಗಿದ್ದರು. ಜಯಕುಮಾರರು ಚಳುವಳಿಯಲ್ಲಿ ನಮಗೆಲ್ಲ ಊರುಗೋಲಾಗಿದ್ದರು. ಬದುಕೆಲ್ಲ ಬೆಂದುಬೆಂದು ಬಾಳುವೆ ಮಾಡಿದವರು. ಮಿತಿಯೇ ಇಲ್ಲದ ಕಷ್ಟ ಗಳನ್ನು ಹುಗಿದಿಟ್ಟು ಇನ್ನೇನು ತನ್ನ ಜೀವನಯಾನ ಮುಗಿಯುವಾಗ ಉತ್ಖನನ ಮಾಡಿ ಚರಿತ್ರೆಯ ಒಂದು ಅಧ್ಯಾಯ ಸೇರಿಸಿದರು. ಜೀವನದಲ್ಲಿ ಎಲ್ಲರಿಗೂ ಕಷ್ಟ ಸುಖ ಬರುತ್ತದೆ, ತನಗೆ ಮಾತ್ರ ಯಾತನೆ ಹೆಚ್ಚು ಬೇರೆಯವರಿಗೆ ಕಡಿಮೆ ಎಂಬುದಿಲ್ಲ. ನಮಗಿಂತ ಕಷ್ಟದಲ್ಲಿ ಬದುಕನ್ನು ಗೆದ್ದವರು ಬಹಳಜನರಿದ್ದಾರೆ ಎಂಬುದಕ್ಕೆ ಜಯಕುಮಾರ್ ಮತ್ತು ಕುಟುಂಬ ಸಾಕ್ಷಿ. ಸಮಾಜಮುಖಿ ಕೆಲಸಗಾರರು, ಹೋರಾಟಗಾರರು, ಬರಹಗಾರರು ಓದಲೇಬೇಕಾದ ಪುಸ್ತಕ ಇದು ಎಂದೇ ನಾನು ಕೆಲವರಿಗೆ ಈ ಪುಸ್ತಕ ತರಿಸಿಲು ಹೇಳಿದೆ ಮಾತ್ರವಲ್ಲ "ಪ್ರೀತಿಪದ" (ಡಾ. ವಿಠ್ಠಲ ಭಂಡಾರಿ ನೆನಪಿನ ಸಮಾಜವಿಜ್ಞಾನ ಅಧ್ಯಯನ ಕೇಂದ್ರ) ದ ಹೆಸರಿನಲ್ಲಿ ಕೆಲವು ಪ್ರತಿ ಖರೀದಿಸಿದೆವು. ಸಹಯಾನದ ಮೊನ್ನೆಯ ಕಾರ್ಯಕ್ರಮಕ್ಕೆ ಬಂದ ಕೆಲವು ಅತಿಥಿಗಳಿಗೆ ಈ ಪುಸ್ತಕ ಕೊಡುಗೆ ನೀಡಿದೆವು.
ಈಗ ಉಳಿದದ್ದು ನೆನಪು ಮತ್ತು ಅಂದು ನೋಡಿದ ಮುಖದ ಛಾಯೆ. ಅವರ ಬಾಳಸಂಗಾತಿಗೆ ಅಂದರೆ ನನ್ನ ಕಾಮ್ರೇಡ್ ಲೀಲಾ ಅವರಿಗೆ ಏನೆಂದು ಸಾಂತ್ವನ ಹೇಳುವುದು... ಅವರ ಪ್ರೀತಿಯ ಆರೈಕೆಯೇ ಜಯಕುಮಾರರ ನೆನಪನ್ನು ಕೂಡ ದೀರ್ಘಕಾಲ ಉಳಿಸುತ್ತದೆಂದು ನಂಬಿರುವೆ. ಅವರ ಧೈರ್ಯ, ಸಾಹಸ, ಸಹನೆಯ ಪಯಣಕ್ಕೆ ಲಾಲ್ ಸಲಾಂ. ಕುಟುಂಬಕ್ಕೆ ತುಂಬು ಪ್ರೀತಿ.
Tuesday, 3 January 2023
ಕಪ್ಪು ಕಣ್ಣೊಳಗಿನ ಬಿಳಿನೀರು
ಕಪ್ಪು ಕಣ್ಣೊಳಗಿನ ಬಿಳಿನೀರು
ದಿನವೂ ಕಾಡುವ ನೋವಿಗೆ
ಕಣ್ಣ ಹನಿಗಳ ಮುಚ್ಚಿಟ್ಟ
ಈ
ರೆಪ್ಪೆಯ ಬಡಿತವೊಂದೇ ಸಾಕ್ಷಿ
ಸದ್ದಿಲ್ಲದೇ ಉದುರುವ ಕಣ್ಣ ಹನಿಗಳು
ಬತ್ತುವುದೇ ಇಲ್ಲ
ಎಷ್ಟು
ಸಹಸ್ರಮಾನ ಕಳೆದರೂ
ಕಪ್ಪು ಬಿಳಿಯಾಗುವುದೇ ಇಲ್ಲ
ಕಣ್ಣೊಳಗೆ ನೀರು ತುಳುಕದೇ ಇರುವ
ಗಳಿಗೆಗಳೇ ವಿರಳ
ಸಾವಿರ ಪ್ರಶ್ನೆಗಳ ಜನ್ಮಸ್ಥಾನದಲ್ಲಿ
ಹುಟ್ಟಿ ಹರಿಯುವ ಈ ಬಿಂದುಗಳೆಲ್ಲ
ಹರಳುಗಟ್ಟುವುದೇ ಇಲ್ಲ
ನನ್ನೊಳಗಿನ ಶಾಖ ತಗುಲಿ
Tuesday, 5 January 2021
ಅಳುವಾ ನೇಗಿಲ ಯೋಗಿಯ ನೋಡಲ್ಲಿ !--ಶಾಂತಾರಾಮ ನಾಯಕ ಹಿಚ್ಕಡ
ಬಿರುಬಿಸಿಲಲಿ ಹಗಲಿರುಳೆನ್ನದೆ
ಹದಮಾಡಿ ಹೊಲಕಾದು ಮಳೆಗಾಗಿ ಸುಸ್ತಾಗಿ
ಕೊನೆಗೂ ಮಳೆ ಬಾರದೆ ಬೆಳೆ ಇಲ್ಲದೆ
ನಿಟ್ಟುಸಿರು ಬಿಡುತ ಹೊಲದೊಳು
ಅಳುವಾ ನೇಗಿಲ ಯೋಗಿಯ ನೋಡಲ್ಲಿ |
ಗೆದ್ದವರೆದ್ದು ರೈತರ ಹೆಸರಲಿ ಘೋರ ಪ್ರತಿಜ್ಞೆ ಗೈದರು
ಗಾಂಧಿ ಪ್ರತಿಮೆಗೆ ಮೊದಲ್ ವಂದಿಪೆ ಎಂದರು!
ಆದರೂ ಬಿತ್ತನೆ ಬೀಜದ ಕೊರತೆ
ತಪ್ಪಲೇ ಇಲ್ಲ ಗೊಬ್ಬರಕಾಗಿ ಹಾಹಾಕಾರ |
ಮಳೆಬೆಳೆ ಇಲ್ಲದೆ ಕಂಗಾಲಾಗಿ
ಸಹಿಸಲಾರದೆ ಸಾಲಶೂಲದ ತಿವಿತ
ಬದುಕಲು ಆಗದೆ ಸಾಯಲು ಆಗದೆ
ಧರ್ಮ ಸಂಕಟದಿ ಸಿಲುಕಿ
ಅಳುವಾ ನೇಗಿಲ ಯೋಗಿಯ ನೋಡಲ್ಲಿ!
ರೈತರ ಹೆಸರಲಿ ದರ್ಪದಿ ಆಳುತ
ರೈತನೇ ದೇಶದ ಬೆನ್ನೆಲುಬೆನ್ನುತ
ಬೆನ್ನಿಗೆ ಲಾಟಿಯ ಏಟನು ಕೊಟ್ಟು
ರೈತರ ಬಂಡಾಯಕೆ ಗೊಳೀಬಾರಿನ ಉತ್ತರ ನೀಡಿ
ಲೋಕಕೆ ಅನ್ನವನೀಯುವ ರೈತರ ಬಾಳಿಗೆ
ಕಿಚ್ಚನ್ನಿಡುವ ಕಳ್ಳಕದೀಮರ ಕಂಡು
ಅಳುವಾ ನೇಗಿಲ ಯೋಗಿಯ ನೋಡಲ್ಲಿ |
ಕಸಿದು ಬಲಾತ್ಕಾರದಿ ರೈತರ ಭೂಮಿಯನು
ನಿರ್ಮಿಸಿ ಮೋಜಿನ ತಾಣಗಳನು
ಅಭಿವೃದ್ಧಿ ಹೆಸರಲಿ ಹಳ್ಳಿಗಳ ಕಬಳಿಸಿ
ಉದ್ದಿಮೆದಾರರ ಹಿತಕೆ ಬಡ ರೈತರ ಬಲಿ |
ನಗರವ ಬೆಳೆಯಿಸಿ ನಾಕವ ನರಕವ ಮಾಡಿ
ನೀಡದೆ ಬೆಂಬಲ ಬೆಲೆ
ಮುರಿಯುತ್ತಿದ್ದಾರೆ ರೈತರ ಬೆನ್ನೆಲುಬು
ಅಳುವಾ ನೇಗಿಲ ಯೋಗಿಯ ನೋಡಲ್ಲಿ |
ಕೋಟಿ ಕೋಟಿ ಸಾಲಮನ್ನಾದ ಉಡುಗೊರೆ
ಉದ್ದಮೆದಾರರಿಗೆ!
ನೇಣಿನ ಉಡುಗೊರೆ ಬಡಪಾಯಿ ಅನ್ನದಾತರಿಗೆ
ರೈತರ ಬಲವನು ಕುಲವನು ಕುಗ್ಗಿಸಿ
ವಂಚನೆ ಮಂತ್ರವ ಪಠಿಸುತ ಬಾಯಲಿ
ಹೊಗಳಿಕೆ ಹಾರವ ತೊಡಿಸಿದರೇನು ಫಲ?
ಹೊಟ್ಟೆಗೆ ಹಿಟ್ಟೇ ಇಲ್ಲ ಜುಟ್ಟಿಗೆ ಮಲ್ಲಿಗೆ ಏತಕೆ
ಕೆರಳಿ ಕೆಂಡವಾಗಿ ರೈತರು ಬದುಕುವ ಹಕ್ಕನ್ನೇ ಕಸಿದುಕೊಂಡ
ಬಂಡ ಸರಕಾರಕೆ ಹಿಡಿ ಶಾಪವ ಹಾಕುತ
ಅಳುವಾ ನೇಗಿಲ ಯೋಗಿಯ ನೋಡಲ್ಲಿ |
ಈ ಪರಿ ನೇಗಿಲ ಯೋಗಿಯ ದುಃಸ್ಥಿತಿ ಕಂಡು
ಕಡುನೊಂದು ಮನದಲಿ
ರಸ ಋಷಿ ಕುವೆಂಪು ಕಣ್ಣೀರಿಡುತಲಿಹರು ಸ್ವರ್ಗದಲಿ!
ಶಾಂತಾರಾಮ ನಾಯಕ ಹಿಚ್ಕಡ
Thursday, 9 April 2020
Monday, 16 September 2019
Saturday, 16 January 2016
Subscribe to:
Comments (Atom)

